ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಕೆಲವೇ ದಿನಗಳು ಬಾಕಿಯಿದೆ, ಆದರೆ ಬಿಜೆಪಿ ಕೋರ್ ಕಮಿಟಿ ಇನ್ನೂ ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ ಹೈಕಮಾಂಡ್ ಗೆ ರವಾನಿಸಿಲ್ಲ, ಇದರ ಜೊತೆಗೆ ಇರುವ ಪಟ್ಟಿಗೆ ಹೊಸ ಹೆಸರುಗಳು ಸೇರಿಕೊಳ್ಳುತ್ತಿವೆ.
ರಾಜ್ಯಸಭೆಗೆ ಕಡ್ಡಾಯವಾಗಿ ಉತ್ತರ ಕರ್ನಾಟಕದ ಲಿಂಗಾಯತ ಮುಖಂಡರೊಬ್ಬರನ್ನು ಆರಿಸಿ ಕಳುಹಿಸಬೇಕು ಎಂಬ ಒತ್ತಡಗಳು
ಕೇಳಿ ಬರುತ್ತಿವೆ, ಪಕ್ಷದ ಹಿರಿಯ ಮುಖಂಡ ಹಾಗೂ ಮಾಧ್ಯಮ ದಿಗ್ಗಜ ವಿಜಯ ಸಂಕೇಶ್ವರ ಹೆಸರು ಕೇಳಿ ಬರುತ್ತಿದೆ.
ಇದರ ಜೊತೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮತ್ತೊಬ್ಬ ಪ್ರಮುಖ ಐಸಿಐಸಿಐ ಮಾಜಿ ಅಧ್ಯಕ್ಷ ವಾಮನ್ ಕಾಮತ್ ಮೇಲೆ ಬಿಜೆಪಿ ಹೈಕಮಾಂಡ್ ದೃಷ್ಟಿ ನೆಟ್ಟಿದೆ. ಕೊರನಾದಿಂದ ಕಂಗೆಟ್ಟಿರುವ ಕೇಂದ್ರ ಸರ್ಕಾರದ ಆರ್ಥಿಕ ಪುನರುಜ್ಜೀವನಕ್ಕೆ ಹಣಕಾಸು ತಜ್ಞರ ಅವಶ್ಯಕತೆಯಿದೆ. ಹೀಗಾಗಿ ವಾಮನ ಕಾಮತ್ ಹೆಸರು ಅಂತಿಮವಾಗುವ ಸಾಧ್ಯತೆಗಳಿವೆ. ಸಂಘ ಪರಿವಾರದ ಮೆಚ್ಚಿನ ಅಭ್ಯರ್ಥಿಯಾಗಿರುವ ವಾಮನ್ ಕಾಮತ್ ಅವರು ಬ್ರಿಕ್ಸ್ ನ ಮೊದಲ ಅಧ್ಯಕ್ಷರೂ ಆಗಿದ್ದರು.
ರಮೇಶ್ ಕತ್ತಿ ಮತ್ತು ಪ್ರಭಾಕರ್ ಕೋರೆ ಅವದಿ ಮುಗಿದಿರುವ ಕಾರಣ ತೆರವಾಗಿರುವ 2 ಸ್ಥಾನಗಳಿಗೆ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕಳುಹಿಸಬೇಕಾಗಿದೆ. ರಾಜ್ಯಸಭೆಗೆ ದಕ್ಷಿಣೇತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪಕ್ಷ ಬಯಸಬಹುದಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.
ಆದರೆ ದಿನದಿಂದ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ, ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಇನ್ನೂ ನಿರ್ಧರಿಸಿಲ್ಲ
Follow us on Social media