ಬೆಂಗಳೂರು : ಆರ್ ಆರ್ ನಗರದಲ್ಲಿ ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿರುವ ಮುನಿರತ್ನ ಅವರ ಆಸ್ತಿ ಹೆಚ್ಚಳವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಈ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ), ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಗೆ ಔಪಚಾರಿಕ ದೂರು ನೀಡಿದೆ.
ಕಾಂಗ್ರೆಸ್ ನೀಡಿರುವ ದೂರಿನ ಪ್ರಕಾರವಾಗಿ ಮುನಿರತ್ನ ಅವರು ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಸುವಾಗ 78.03 ಕೋಟಿ ರೂ. ಆಸ್ತಿ ವಿವರ ನೀಡಲಾಗಿದೆ. ಎರಡು ಬಾರಿ ಶಾಸಕರಾಗಿದ್ದ ಮತ್ತು ಎರಡೂ ಸಂದರ್ಭಗಳಲ್ಲಿ ಆರ್.ಆರ್.ನಗರ ಕ್ಷೇತ್ರವನ್ನು ಪ್ರತಿನಿಧಿಸಿರುವ ಮುನಿರತ್ನ ಅವರು ತಮ್ಮ ಆಸ್ತಿ 28.83 ಕೋಟಿ ರೂ ಎಂದು 2013 ರಲ್ಲಿ ಘೋಷಿಸಿದ್ದರು. 2018 ರಲ್ಲಿ ಅವರು ನಾಮಪತ್ರ ಸಲ್ಲಿಸುವಾಗ 43.71 ಕೋಟಿ ರೂ. ಆಸ್ತಿಯನ್ನು ಘೋಷಿಸಿದ್ದರು. ಆದರೆ ಈಗ 78.03 ಕೋಟಿ ರೂ.ಗೆ ಆಸ್ತಿ ಏರಿಕೆಯಾಗಿದೆ.
ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಸಲೀಮ್ ಅಹ್ಮದ್ ಅವರು, “ಒಂದು ಹಣಕಾಸು ವರ್ಷದಲ್ಲಿ ಮುನಿರತ್ನ ಅವರ ಆಸ್ತಿ 35 ಕೋಟಿ ರೂ.ಗೆ ಏರಿದೆ ಎಂಬುದು ಸ್ಪಷ್ಟವಾಗಿದೆ. ಅವರ ಆಸ್ತಿ 2018-19ರಲ್ಲಿ 43 ಕೋಟಿ ರೂ. ಇದ್ದು 2019-20ರಲ್ಲಿ 78 ಕೋಟಿ ರೂ.ಗೆ ಏರಿದೆ. ಬಿಜೆಪಿಯ ಮೇಲೆ ಕಾಂಗ್ರೆಸ್ ಆರೋಪ ಮಾಡುತ್ತಿರುವುದಕ್ಕೆ ಸ್ಪಷ್ಟ ಪುರಾವೆಯಾಗಿದೆ. ಬಿಜೆಪಿಯು ಆಪರೇಷನ್ ಕಮಲ ಮೂಲಕ ಕುದುರೆ ವ್ಯಾಪಾರ ನಡೆಸುವುದರಲ್ಲಿ ತೊಡಗಿದೆ ಎಂದು ಆರೋಪಿಸಿದರು.
ರಾಜ್ಯದ ಶಾಸಕರನ್ನು ಕೊಂಡುಕೊಳ್ಳಲು ಕಪ್ಪುಹಣವನ್ನು ಬಳಸಿಕೊಂಡ ಪ್ರಕರಣವೂ ಕೂಡಾ ಇದಾಗಿದೆ ಎಂದು ದೂರಿದರು.
Follow us on Social media