ಬಂಟ್ವಾಳ: ಸ್ನಾನ ಮಾಡಲು ಉಪಯೋಗಿಸುವ ವಿದ್ಯುತ್ ಕಾಯಿಲ್ ನ ಮೂಲಕ ಶಾಕ್ ಹೊಡೆದು ವ್ಯಕ್ತಿಯೋರ್ವರು ಸ್ನಾನಗೃಹದಲ್ಲಿಯೇ ಮೃತಪಟ್ಟ ಘಟನೆ ಬ್ರಹ್ಮರಕೊಟ್ಲು ಎಂಬಲ್ಲಿ ನಡೆದಿದೆ.
- ಮೂಲತಃ ನೀರು ಮಾರ್ಗ ನಿವಾಸಿಯಾಗಿರುವ ಪ್ರಸ್ತುತ ಬ್ರಹ್ಮರಕೊಟ್ಲು ಕಳ್ಳಿಗೆ ಚಂದ್ರಿಗೆಯ ಪರಿಯೋಡಿಬೀಡು ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿರುವ ಹೇಮಚಂದ್ರ (49) ಮೃತಪಟ್ಟ ವ್ಯಕ್ತಿ. ಹೇಮಚಂದ್ರ ಅವರ ಪತ್ನಿ ಮನೆ ಚಂದ್ರಿಗೆಯಲ್ಲಿದ್ದು, ಅಲ್ಲೇ ಸಮೀಪ ಪೆರಿಯೋಡಿಬೀಡು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಇಬ್ಬರು ಮಂಗಳೂರಿಗೆ ಕೆಲಸಕ್ಕೆ ಹೋಗುತ್ತಿದ್ದರು.ಹೇಮಚಂದ್ರ ಅವರು ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದವರು ಸ್ನಾನ ಮಾಡಲು ಸ್ನಾನಗೃಹಕ್ಕೆ ತೆರಳಿದ್ದರು. ಆದರೆ ಸುಮಾರು ಹೊತ್ತು ಕಳೆದರೂ ಗಂಡ ಸ್ನಾನ ಮಾಡಿ ಹೊರಗೆ ಬರದೆ ಇರುವುದನ್ನು ಕಂಡು ಬಾಗಿಲು ತಟ್ಟಿದರೂ ಕರೆದರೂ ಯಾವುದೇ ಪ್ರತಿಕ್ರಿಯೆ ನೀಡದೆ ಇರುವಾಗ ಹೆದರಿಕೆಯಿಂದ ಬಾಗಿಲು ಮುರಿದು ನೋಡಿದಾಗ ಹೇಮಚಂದ್ರ ಅವರು ಸ್ನಾನಗೃಹದಲ್ಲಿ ಬಕೆಟ್ ನಲ್ಲಿ ಕೈಯಿದ್ದು ಕೆಳಗೆ ಬಿದ್ದಿದ್ದರು. ನೋಡಿದಾಗ ಬಿಸಿನೀರು ಕಾಯಿಸುವ ವಿದ್ಯುತ್ ಕಾಯಿಲ್ ಮೂಲಕ ಶಾಕ್ ಹೊಡೆದು ಅವರು ಕೆಳಗೆ ಬಿದಿರುವುದು ಗಮನಕ್ಕೆ ಬಂದಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದೆಯಾದರೂ ಅದಾಗಲೇ ಅವರು ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದರು.
ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.