ಮೈಸೂರು : ಪಾದರಾಯನಪುರ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಿರುವುದರ ಹಿಂದೆ ಎಡಿಜಿಪಿಯೊಬ್ಬರ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದರಾಯನಪುರ ಘಟನೆಯ ಆರೋಪಿಗಳನ್ನು ರಾಮನಗರಕ್ಕೆ ಸ್ಥಳಾಂತರಿಸಿರುವುದು ಕೂಡ ಅವಿವೇಕತನದ ನಿರ್ಧಾರವಾಗಿದೆ. ಈ ಬಗ್ಗೆ ಈಗಾಗಲೇ ಎರಡೆರಡು ಬಾರಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೊಂದಿಗೆ ಮಾತನಾಡಿ ಈ ಅನಾಹುತವನ್ನು ಸರಿಪಡಿಸುವಂತೆ ಒತ್ತಾಯಿಸಿದ್ದೇನೆ. ಇಂತಹ ಅವಿವೇಕತನದ ಸಲಹೆಯನ್ನು ಯಾರು ಕೊಟ್ಟಿದ್ದಾರೋ ಗೊತ್ತಿಲ್ಲ. ಪರಪ್ಪನ ಅಗ್ರಹಾರದಲ್ಲಿ ಆರೋಪಿಗಳನ್ನು ಇಡಲು ಸಾಧ್ಯವಿಲ್ಲ ಎಂದು ಸ್ವತಃ ಎಡಿಜಿಪಿ ನ್ಯಾಯಾಲಯಕ್ಕೆ ಹೇಳಿದ್ದಾರೆ ಎಂಬ ಮಾಹಿತಿ ಇದೆ. ರೆಡ್ ಝೋನ್‌ನಲ್ಲಿರುವ ಬೆಂಗಳೂರಿನಿಂದ ಗ್ರೀನ್ ಝೋನ್‌ನಲ್ಲಿರುವ ರಾಮನಗರಕ್ಕೆ ಶಂಕಿತ ಕೋವಿಡ್ ಸೋಂಕಿತರನ್ನು ಸ್ಥಳಾಂತರ ಮಾಡಿರುವುದು ಸರಿಯಲ್ಲ. ರಾಮನಗರಕ್ಕೆ ಸ್ಥಳಾಂತರ ಮಾಡುವುದರ ಬದಲು ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ 1500 ಬೆಡ್‌ಗಳಲ್ಲಿ ಐಸೋಲೇಷನ್‌ನಲ್ಲಿ ಇಡಬೇಕಾಗಿತ್ತು. ಅಧಿಕಾರಿಗಳು ಸರ್ಕಾರವನ್ನು ದಾರಿ ತಪ್ಪಿಸುತ್ತಿದ್ದಾರೆ. ತಪ್ಪನ್ನು ಸರಿಪಡಿಸುತ್ತೇನೆ ಎಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಭರವಸೆ ನೀಡಿದ್ದಾರೆ. ಆದರೆ ಇನ್ನೂ ಈಡೇರಿಲ್ಲ. ಸ್ಥಳಾಂತರ ಮಾಡಲು ಬಂದಿದ್ದ ವಾಹನವನ್ನು ಎಡಿಜಿಪಿ ಹಿಂದಕ್ಕೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.
ಎರಡು ಹಂತಗಳಲ್ಲಿ ಕೈದಿಗಳನ್ನು ರಾಮನಗರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಮೊದಲ ಹಂತದಲ್ಲಿ 49 ಆರೋಪಿಗಳು, ಎರಡನೇ ಹಂತದಲ್ಲಿ 72 ಮಂದಿಯನ್ನು ಯಾವುದೇ ವೈದ್ಯಕೀಯ ತಪಾಸಣೆ ನಡೆಸದೆ ಸ್ಥಳಾಂತರ ಮಾಡಲಾಗಿದೆ. ಅವರಿಗೆ ಒಂದೇ ಶೌಚಾಲಯ, ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಂಕಿತ ಇಬ್ಬರನ್ನು ಐವರು ಪೊಲೀಸರು ಪೊಲೀಸ್ ವಾಹನದಲ್ಲಿ ಯಾವುದೇ ಮುಂಜಾಗೃತಾ ಕ್ರಮಕೈಗೊಳ್ಳದೆ ಸ್ಥಳಾಂತರ ಮಾಡಿದ್ದಾರೆ. ಇದೀಗ ಅಧಿಕಾರಿಗಳಲ್ಲೂ ಸೋಂಕಿನ ಬಗ್ಗೆ ಆತಂಕ ಉಂಟಾಗಿದೆ. ಆದ್ದರಿಂದ ಇಡೀ ಜೈಲನ್ನು ಸೀಲ್ ಡೌನ್ ಮಾಡಿ ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಬೇಕು ಎಂದು ಹೇಳಿದರು.