ಬೆಂಗಳೂರು: ಪಕ್ಷ ಸಂಘಟನೆ ಶಕ್ತಿಯೇ ಮೇಲ್ಮನೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗೆ ಇರಬೇಕಾದ ಅರ್ಹತೆ. ಇದೇ ಮಾನದಂಡವನ್ನಾಧರಿಸಿ ಶಾಸಕರ ಅಭಿಪ್ರಾಯ, ಸಲಹೆ ಸೂಚನೆ ಸಂಗ್ರಹಿಸಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಆ ಮೂಲಕ ತೆನೆಹೊತ್ತ ಮಹಿಳೆಯ ಗಟ್ಟಿತನಕ್ಕೆ ಮುಂದಿನ ರಾಜಕೀಯ ಪಕ್ಷಕ್ಕೆ ಪಕ್ಷ ಸಂಘಟನೆಯೇ ಆಧಾರವೆಂಬುದನ್ನು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ದೇವನಹಳ್ಳಿಯ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. ಆ ಮೂಲಕ ವಿಧಾನ ಪರಿಷತ್ತು ಪ್ರವೇಶಿಸುವ ತೆನೆಹೊತ್ತ ಮಹಿಳೆಯ ಹುರಿಯಾಳು ಯಾರೆಂಬುದು ಕುತೂಹಲ ಮೂಡಿಸಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ಜೂ.29ರಂದು ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಹಾಗೂ ಕೋಲಾರದ ಉದ್ಯಮಿ ಗೋವಿಂದರಾಜು ನಡುವೆ ಪ್ರಬಲ ಪೈಪೋಟಿ ಇದ್ದು, ಈ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡುವುದು ಖಚಿತ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಉತ್ತರ ಕರ್ನಾಟದ ಭಾಗಕ್ಕೆ ಅವಕಾಶ ನೀಡಬೇಕು ಹಾಗೂ ಕೋಲಾರ ಜಿಲ್ಲೆಯ ಪಕ್ಷದ ಶಾಸಕರು ಹಾಗೂ ಮುಖಂಡರು ನಿನ್ನೆ ಗೌಡರನ್ನು ಭೇಟಿ ಮಾಡಿ ಗೋವಿಂದರಾಜುರಿಗೆ ಟಿಕೆಟ್ ನೀಡುವಂತೆ ಒತ್ತಡ ಹೇರಿದ್ದಾರೆ.
ಹಾಲಿ ಸದಸ್ಯ ಟಿ.ಎ.ಶರವಣ ಸಹ ಪ್ರಬಲ ಆಕಾಂಕ್ಷಿಯಾಗಿದ್ದು, ಮತ್ತೊಂದು ಅವಧಿಗೆ ಅವಕಾಶ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ. ಇರುವ ಒಂದು ಸದಸ್ಯ ಸ್ಥಾನಕ್ಕೆ ಹಲವು ಆಕಾಂಕ್ಷಿಗಳಿದ್ದು, ಅಭ್ಯರ್ಥಿ ಆಯ್ಕೆ ಅಧಿಕಾರ ದೊಡ್ಡಗೌಡರಿಗೆ ನೀಡಲಾಗಿದೆ.
ನಾಮಪತ್ರ ಸಲ್ಲಿಸಲು ಗುರುವಾರ ಅಂತಿಮ ದಿನವಾಗಿರುವುದರಿಂದ ಬುಧವಾರ ರಾತ್ರಿ ವೇಳೆಗೆ ಪಕ್ಷದ ಅಭ್ಯರ್ಥಿ ಹೆಸರು ಪ್ರಕಟವಾಗಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
Follow us on Social media