ಬೆಂಗಳೂರು : “ಕಾಂಗ್ರೆಸ್ನಿಂದ ಬೇರೆ ಪಕ್ಷಗಳಿಗೆ ಹೋಗಿದ್ದ ಹಲವು ನಾಯಕರು ಮತ್ತೆ ಪಕ್ಷಕ್ಕೆ ಮರಳಿ ಬರಲು ಇಚ್ಛಿಸಿದ್ದಾರೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಶ್ವ ಪರಿಸರ ದಿನದ ಅಂಗವಾಗಿ ಶುಕ್ರವಾರ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಗಿಡ ನೆಟ್ಟ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ”ಕಾಂಗ್ರೆಸ್ನಿಂದ ಬೇರೆ ಪಕ್ಷಕ್ಕೆ ಹೋದವರು ವಾಪಾಸ್ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಈ ಬಗ್ಗೆ ಪರಿಶೀಲಿಸಲು ಅಲ್ಲಂ ವೀರಭದ್ರಪ್ಪ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯ ಶಿಫಾರಸು ಆಧಾರದಲ್ಲಿ ಯಾರನ್ನು ಪಕ್ಷಕ್ಕೆ ಸೇರಿಸುವುದು ಎಂಬ ನಿರ್ಧಾರ ಮಾಡಲಾಗುತ್ತದೆ” ಎಂದು ತಿಳಿಸಿದ್ದಾರೆ.
”ಇನ್ನು ಸ್ಥಳೀಯ ಮಟ್ಟದಲ್ಲಿ ಚರ್ಚಿಸದೆ ಪಕ್ಷಕ್ಕೆ ಸೇರ್ಪಡೆ ಮಾಡಿದರೆ ಮುಂದೆ ಸಮಸ್ಯೆ ಉಂಟಾಗುವ ಸಾಧ್ಯತೆ ಅಧಿಕ. ಆ ನಿಟ್ಟಿನಲ್ಲಿ ಪಕ್ಷಕ್ಕೆ ಸೇರಿಸುವ ಸಂದರ್ಭದಲ್ಲಿ ಬರಲು ಇಚ್ಛಿಸುವವರು ಪಕ್ಷಕ್ಕೆ ಸೇರ್ಪಡೆ ಮಾಡಬಹುದೆ ಎಂದು ಇತರ ನಾಯಕರು ಹಾಗೂ ಸ್ಥಳೀಯ ಕಾರ್ಯಕರ್ತರೊಂದಿಗೆ ಚರ್ಚಿಸಲಾಗುತ್ತದೆ” ಎಂದು ಹೇಳಿದರು.
“ಅಧಿಕಾರದ ಆಸೆಯಿಂದ ಪಕ್ಷಕ್ಕೆ ವಾಪಾಸ್ ಬರುವವರು ನಮಗೆ ಬೇಡ. ಪಕ್ಷದ ಸಿದ್ಧಾಂತ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವದ ಮೇಲೆ ನಂಬಿಕೆಯಿರಿಸಿ ತಾಲೂಕು ಮಟ್ಟದಲ್ಲಿ ಕಾರ್ಯಕರ್ತರೊಂದಿಗೆ ಕೆಲಸ ನಿರ್ವಹಣೆ ಮಾಡಲು ಬದ್ಧವಾಗಿದ್ದರೆ ಮಾತ್ರ ಪಕ್ಷಕ್ಕೆ ಸೇರ್ಪಡೆ ಮಾಡಲಾಗುತ್ತದೆ” ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ, “ಕೆಲವರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದು ಅವರು ಚುನಾವಣೆ ಎಂದರೆ ಕಡಲೆಪುರಿ ವ್ಯಾಪಾರ ಎಂದು ಕೊಂಡಿದ್ದಾರೆ ಅನಿಸುತ್ತದೆ. ಅದಕ್ಕೆ 20, 30 ಅಂತ ನಂಬರ್ ಹೇಳ್ತಾರೆ. ಯಾರು ಈ ಹೇಳಿಕೆ ನೀಡುತ್ತಿದ್ದಾರೆ. ಯಾರು ಎಲ್ಲಿ ಸಭೆ ನಡೆಸುತ್ತಿದ್ದಾರೆ ಎಂಬುದನ್ನು ನಾವೂ ಗಮನಿಸುತ್ತಿದ್ದೇವೆ. ಆದರೆ ನಮಗೆ ಬೇರೆ ಮನೆಯ ವಿಚಾರ ಬೇಡ. ನಮ್ಮ ಮನೆ ಉಂಟು, ನಮ್ಮ ಶಾಸಕರುಂಟು” ಎಂದು ಹೇಳಿದರು.
Follow us on Social media