ಬೆಂಗಳೂರು : ನಾವು ದೀಪ ಹಚ್ಚುವವರ ಪರ, ಬೆಂಕಿ ಹಚ್ಚುವವರ ಪರ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
”ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ದಲಿತರ ಪರವೋ ಭಯೋತ್ಪಾದಕರ ಪರವೋ” ಎಂದು ಬೆಂಗಳೂರು ಗಲಭೆಯ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ನಳಿನ್ ಕುಮಾರ್ ಅವರು ಪ್ರಶ್ನಿಸಿದ್ದು ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯನವರು ”ನಾವು ದೀಪ ಹಚ್ಚುವವರ ಪರ, ಬೆಂಕಿ ಹಚ್ಚುವವರ ಪರ ಅಲ್ಲ” ಎಂದು ಹೇಳಿದ್ದಾರೆ.
”ನಳಿನ್ ಕಟೀಲ್ ಅವರೇ, ನಾವು ಮನುಷ್ಯರ ಪರ, ಮನುಷ್ಯವಿರೋಧಿಗಳ ಪರ ಅಲ್ಲ, ನಾವು ದೀಪ ಹಚ್ಚುವವರ ಪರ, ಬೆಂಕಿ ಹಚ್ಚುವವರ ಪರ ಅಲ್ಲ, ನಾವು ಕಟ್ಟುವವರ ಪರ, ಕೆಡವುವವರ ಪರ ಅಲ್ಲ. ನಮ್ಮನ್ನು ಮತ್ತು ನಿಮ್ಮನ್ನು ಇದಕ್ಕಿಂತ ಚೆನ್ನಾಗಿ ಹೇಗೆ ಪರಿಚಯಿಸಲಿ ಹೇಳಿ?” ಎಂದು ಟ್ವೀಟ್ ಮೂಲಕ ವ್ಯಂಗ್ಯ ಮಾಡಿದ್ದಾರೆ.
ಹಾಗೆಯೇ ”ನಳಿನ್ ಅವರೇ, ನೀವು ದಲಿತರ ಪರವೋ? ಹಿಂದೂಗಳ ಪರವೋ? ನೀವೊಬ್ಬ ಹಿಂದುವಾದರೆ, ಅಖಂಡ ಶ್ರೀನಿವಾಸಮೂರ್ತಿ ಯಾಕೆ ಹಿಂದು ಅಲ್ಲ? ಅವರು ಯಾಕೆ ಹಿಂದು ಆಗದೆ ಕೇವಲ ದಲಿತ ಆಗಿಬಿಟ್ಟರು? ಹಿಂದುತ್ವದ ಸರಿಯಾದ ವ್ಯಾಖ್ಯಾನ ಏನೆಂದು ನಿಮ್ಮ ಹಿರಿಯರಿಂದ ಕೇಳಿ ತಿಳಿದುಕೊಂಡು ಸ್ಪಷ್ಟಪಡಿಸುವಿರಾ?” ಎಂದು ಪ್ರಶ್ನಿಸಿದ್ದಾರೆ.
Follow us on Social media