ಬೆಂಗಳೂರು: ನನ್ನನ್ನು ಇಂಜಿನಿಯರ್ ಬೊಮ್ಮಾಯಿ ಎಂದು ಕರೆದರೆ ಖುಷಿಯಾಗುತ್ತದೆ. ನನ್ನಲ್ಲಿರುವ ಇಂಜಿನಿಯರ್ ಸದಾ ಕಾಲ ಜಾಗೃತನಾಗಿರುತ್ತಾನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸರ್ ಎಂ ವಿಶ್ವೇಶ್ವರಯ್ಯನವರ 161ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ, ನಾವು ಸಾರ್ವಜನಿಕ ಜೀವನದಲ್ಲಿ ಸೇವಾ ವಲಯದಲ್ಲಿದ್ದೇವೆ. ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರಬಹುದು. ಆದರೆ ಪ್ರತಿಯೊಂದು ವಿಚಾರವನ್ನು ತರ್ಕಬದ್ಧವಾಗಿ ನೋಡುವುದು, ಚಿಂತನೆ ನಡೆಸುವುದು ನನ್ನೊಳಗಿರುವ ಇಂಜಿನಿಯರಿಂಗ್ ಅಧ್ಯಯನದಿಂದ ಎಂದು ಹೇಳಿದರು.
ಸರ್ ಎಂ ವಿಶ್ವೇಶ್ವರಯ್ಯನವರು ಇಂಜಿನಿಯರ್ ಆಗಿದ್ದವರು. ಮೈಸೂರು ದಿವಾನರಾಗಿ, ಉತ್ತಮ ಆಡಳಿತಗಾರನಾಗಿ ಹಲವಾರು ಸಾಧನೆಗಳನ್ನು ಮಾಡಿದ್ದರು. ಅವರು ಕೆಲಸ ಮಾಡಿದ ರೀತಿ, ಬೇರೆ ರಾಜ್ಯಗಳಿಗೂ ಅವರು ನೀಡಿದ ಸೇವೆ ನೋಡಿದಾಗ ಅವರ ಜೀವನ ಸಾರ್ಥಕತೆಯಿಂದ ಕೂಡಿದ್ದು, ಅನುಕರಣೀಯವಾಗಿದೆ ಎಂದು ಸಿಎಂ ಹೇಳಿದರು.
ಇಂದಿನ ಇಂಜಿನಿಯರ್ ಗಳು ವಿಶ್ವೇಶ್ವರಯ್ಯನವರ ಕೆಲಸ, ಸಾಧನೆಗಳಲ್ಲಿ ಅಲ್ಪವನ್ನು ಮಾಡಿದರೆ ಅವರಿಗೆ ಕೊಡುವ ಗೌರವ. ವಿಶ್ವೇಶ್ವರಯ್ಯ ಇದ್ದಿದ್ದರೆ ಯಾವ ರೀತಿ ಸಮಸ್ಯೆಗಳಿಗೆ ಪರಿಹಾರ ಕೊಡುತ್ತಿದ್ದರು ಎನ್ನುವ ಪ್ರಶ್ನೆ ನಾವೂ ಹಾಕಿಕೊಳ್ಳಬೇಕು. ಆ ಪ್ರಶ್ನೆ ಹಾಕಿಕೊಂಡು ಕೆಲಸ ಮಾಡಬೇಕು. ಇಡೀ ವ್ಯವಸ್ಥೆಯೇ ಹಾಳಾಗುತ್ತಿದೆ. ಸರ್ಕಾರದ ಹಣ ಅದು ಸಾರ್ವಜನಿಕರ ಹಣ. ನಾವೂ ನಮ್ಮ ಮನೆ ಕಟ್ಟಬೇಕಾದರೇ ಯಾವ ರೀತಿ ಗುಣಮಟ್ಟ ಬಯಸುತ್ತೇವೆಯೋ ಅದೇ ರೀತಿ ಸರ್ಕಾರದ ಕೆಲಸವನ್ನ ಮಾಡಬೇಕು ಅಂತಾ ಇಂಜಿನಿಯರ್ ಗಳಿಗೆ ಸಿಎಂ ಎಚ್ಚರಿಸಿದರು.
ವಿಶ್ವೇಶ್ವರಯ್ಯ ಜನ್ಮದಿನವನ್ನ ಶ್ರಮಜೀವಿಗಳಿಗೆ ಅರ್ಪಿಸುತ್ತೇನೆ. ಅವರು ಇಲ್ಲದಿದ್ದರೆ ಇಂಜಿನಿಯರ್ ಗಳು ಡ್ರಾಯಿಂಗ್ ಬಾಕ್ಸ್ನಲ್ಲಿ ಕಳೆದು ಹೋಗುತ್ತೀರಿ. ಶ್ರಮಜೀವಿಗಳು ದೇಶಕ್ಕೆ ಬೆನ್ನೆಲುಬು. ಇವತ್ತು ಒಂದು ದಿನ ವಿಶ್ವೇಶ್ವರಯ್ಯರನ್ನು ನೆನೆದರೆ ಸಾಕಾಗಲ್ಲ. ಅವರ ಆದರ್ಶ ಸದಾ ಪಾಲಿಸಬೇಕು. ಅವರ ಬಯಸಿದ ನಾಡನ್ನ ಕಟ್ಟೋಣ ಅಂತ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಅಧಿಕಾರಿಗಳಿಗೆ ಕಿವಿಮಾತು, ಮಾರ್ನಿಂಗ್: ವಿಶ್ವೇಶ್ವರಯ್ಯನವರ ಸಮಯಪ್ರಜ್ಞೆ ಆದರ್ಶ ಮತ್ತು ಅನುಕರಣೀಯವಾಗಿತ್ತು. ಸಮಯ ಪಾಲನೆಗೆ ಅವರು ಮಹತ್ವ ನೀಡುತ್ತಿದ್ದರು. ಬೇರೆ ದೇಶಗಳಲ್ಲಿ ಕಾರ್ಯಕ್ರಮ ಮುಕ್ಕಾಲು ಗಂಟೆಗೆ ಮುಗಿಯುತ್ತೆ. ಆದರೆ ನಮ್ಮಲ್ಲಿ ಇದ್ದವರು ಇಲ್ಲದವರನ್ನು ಸ್ವಾಗತ ಮಾಡುತ್ತಾರೆ. ಇದು ಸ್ವಲ್ಪ ಬದಲಾವಣೆ ಆಗಬೇಕು ಎಂದು ನನ್ನ ಭಾವನೆ ಎಂದರು.
ಸ್ವಾಗತ ಭಾಷಣ 10 ನಿಮಿಷ ಮೀರಿದ್ದಕ್ಕೆ ಕಾರ್ಯಕ್ರಮದ ಆರಂಭದಲ್ಲಿ ಸಿಎಂ ಗರಂ ಆದರು. ಕೆಲ ದೇಶಗಳಲ್ಲಿ ಕಾರ್ಯಕ್ರಮ ಮುಕ್ಕಾಲು ಗಂಟೆಗೆ ಮುಗಿಯುತ್ತದೆ. ಆದರೆ ನಮ್ಮಲ್ಲಿ ಇದ್ದವರು ಇಲ್ಲದವರನ್ನು ಸ್ವಾಗತ ಮಾಡುತ್ತಾರೆ. ಇದು ಸ್ವಲ್ಪ ಬದಲಾವಣೆ ಆಗಬೇಕು ಅಂತ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ 10 ನಿಮಿಷ ಮೀರಿದ್ದಕ್ಕೆ ಸಿಎಂ ಗರಂ ಆದರು.
Follow us on Social media