ಬೆಂಗಳೂರು: ನಂದಿನಿ ಹಾಲಿನ ದರ ಹೆಚ್ಚಳ ಮಾಡುವಂತೆ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಕೆಎಂಎಫ್ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಇತರೇ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ನಂದಿನಿ ಹಾಲಿನ ದರ ಕಡಿಮೆ ಇದೆ. ರೂ. 37 ರಂತೆ ಪ್ರತಿ ಲೀಟರ್ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಹಾಲಿನ ದರದಲ್ಲಿ ಪ್ರತಿ ಲೀಟರ್ ಗೆ 3 ರೂ.ಹೆಚ್ಚಳ ಮಾಡುವಂತೆ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮನವಿ ಮಾಡಿದ್ದಾರೆ. ಇದರಿಂದ ಪ್ರತಿ ಲೀಟರ್ ಹಾಲಿಗೆ 40 ರೂ. ದರ ನಿಗದಿಪಡಿಸಿದಂತಾಗುತ್ತದೆ ಎಂದರು.
ಒಂದು ವೇಳೆ ಪ್ರತಿ ಲೀಟರ್ ಹಾಲಿನ ದರ 37 ರೂಪಾಯಿಯಿಂದ 40 ರೂಪಾಯಿಗಳಾದರೆ ಅದರಲ್ಲಿ ರೈತರಿಗೆ 3 ರೂಪಾಯಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಬೆಳಗಾವಿಯಲ್ಲಿ ಮೇಗಾ ಫುಡ್ ಪಾರ್ಕ್ ಆರಂಭಿಸುವ ಕಾರ್ಯ ಪ್ರಗತಿಯಲ್ಲಿದ್ದು, ಪನ್ನೀರ್ ಮತ್ತಿತರ ನಂದಿನಿ ಸಿಹಿ ಉತ್ಪನ್ನಗಳನ್ನು ಈ ಘಟಕದ ಮೂಲಕ ಉತ್ಪಾದಿಸಿ ಮಾರುಕಟ್ಟೆ ಜಾಲವನ್ನು ವಿಸ್ತರಿಸಲಾಗುವುದು, ಹಾಲಿನ ಉತ್ಪನ್ನಗಳ ಮಾರಾಟವನ್ನು ವಿಸ್ತರಿಸಲು ವಿಷನ್ 2024-26 ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
2021-22ನೇ ಸಾಲಿನಲ್ಲಿ ಕೆಎಂಎಫ್ ಐದು ಪಶು ಆಹಾರ ಘಟಕಗಳಿಂದ ಒಟ್ಟು 7.28 ಲಕ್ಷ ಮೆಟ್ರಿಕ್ ಟನ್ ಪಶು ಆಹಾರ ಉತ್ಪಾದನೆಯ ಗುರಿ ಹೊಂದಲಾಗಿದೆ. ಒಟ್ಟಾರೇ ಅಂದಾಜು 1017 ಕೋಟಿ ರೂ.ಗಳ ವಹಿವಾಟು ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಜಾರಕಿಹೊಳಿ ಹೇಳಿದರು.
Follow us on Social media