ಬೆಳಗಾವಿ : ಧಾರವಾಡ ಮತ್ತು ಬೆಳಗಾವಿ ರೈಲು ಸಂಪರ್ಕ ಯೋಜನೆಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಇಂದು ಬೆಳಗಾವಿಯ ತಿಲಕವಾಡಿಯ ಮಿಲೇನಿಯಮ್ ಗಾರ್ಡನ್ ಬಳಿ ಆಯೋಜಿಸಿದ್ದ ಬಿ.ಎಸ್.ಚನ್ನಬಸಪ್ಪ ಟೆಕ್ಸ್ ಟೈಲ್ ಶೋರೂಂ ಉದ್ಘಾಟಿಸಿ ಮಾತನಾಡಿದರು. ಬೆಳಗಾವಿ ಪ್ರಮುಖವಾದ ವಾಣಿಜ್ಯ ಕೇಂದ್ರ. ಇಲ್ಲಿ ಹಲವಾರು ಉದ್ದಿಮೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಧಾರವಾಡ ಮತ್ತು ಬೆಳಗಾವಿ ರೈಲು ಸಂಪರ್ಕ ಯೋಜನೆ ಅನುದಾನ ಬಿಡುಗಡೆಗೆ ಮಂಜೂರಾತಿ ನೀಡಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಆದಷ್ಟು ಬೇಗನೆ ಕಾಮಗಾರಿಗೆ ಚಾಲನೆಯನ್ನು ನೀಡಲಾಗುವುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಅನುಮತಿಗಳನ್ನು ನೀಡಿದೆ. ಬೆಳಗಾವಿಯಲ್ಲಿ ಹಲವಾರು ಅಭಿವೃದ್ಧಿಯ ಕಾರ್ಯಕ್ರಮಗಳು ಕೈಗೊಳ್ಳಲಾಗುತ್ತಿವೆ ಎಂದು ತಿಳಿಸಿದರು.
ಬಿ.ಎಸ್.ಚನ್ನಬಸಪ್ಪ ಟೆಕ್ಸ್ ಟೈಲ್ ಶೋರೂಂ ನಲ್ಲಿ ಉತ್ತಮ ಗುಣಮಟ್ಟದ ವಸ್ತ್ರಗಳು ವಿವಿಧ ದರಗಳಲ್ಲಿ ಒಂದೇ ಸೂರಿನಡಿ ಲಭ್ಯವಿದ್ದು, ವಸ್ತ್ರಪ್ರಿಯರಿಗೆ ಸಂತೋಷವನ್ನು ನೀಡಲಿದೆ ಎಂದು ತಿಳಿಸಿದರು. ಕರ್ನಾಟಕದವರೇ ಆದ ಬಿಎಸ್ ಸಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಕನ್ನಡದವಲ್ಲಿ ವ್ಯಾಪಾರ ಮಾಡುವ ಯುಕ್ತಿ , ಶಕ್ತಿ ಇದೆ, ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂಬುದನ್ನು ಬಿಎಸ್ ಸಿ ಕುಟುಂಬದವರು ನಿರೂಪಿಸಿದ್ದಾರೆ ಎಂದು ತಿಳಿಸಿದರು.
Follow us on Social media