ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬರಲಿಲ್ಲ ಅಥವಾ ಫೇಲಾದೆವು ಎನ್ನುವ ಕಾರಣಕ್ಕೆ ರಾಜ್ಯದಲ್ಲಿ 8 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧಿತ ವರದಿಯೊಂದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬರಲಿಲ್ಲ ಅಥವಾ ಫೇಲಾದೆವು ಎನ್ನುವ ಕಾರಣಕ್ಕೆ ರಾಜ್ಯದಲ್ಲಿ 8 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಸುದ್ದಿ ನನಗೆ ತೀವ್ರ ದಿಗ್ಬ್ರಮೆ ಉಂಟು ಮಾಡಿದೆ ಎಂದಿದ್ದಾರೆ.
ಶೈಕ್ಷಣಿಕ ವ್ಯವಸ್ಥೆಯಲ್ಲಿ ಪರೀಕ್ಷಾ ಹಂತಗಳು ಇರುವಂತೆಯೇ ಬದುಕಿನುದ್ದಕ್ಕೂ ಅಗ್ನಿಪರೀಕ್ಷೆಗಳೇ ಇರುತ್ತವೆ. ಅವನ್ನು ಧೈರ್ಯ, ಛಲದಿಂದ ಎದುರಿಸಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಪೋಷಕರು, ಬೋಧಕರು, ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣ ಇಲಾಖೆ ಮನದಟ್ಟು ಮಾಡಿಸಬೇಕು ಎಂದು ಅವರು ಹೇಳಿದ್ದಾರೆ.
ವಿದ್ಯಾಭ್ಯಾಸದಲ್ಲಿ ಹಿಂದುಳಿದ ಅನೇಕರು ಉನ್ನತ ಸ್ಥಾನಗಳಿಗೆ ಹೋಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಹೀಗಾಗಿ ಧೃತಿಗೇಡಬೇಕಿಲ್ಲ. ಪೋಷಕರು ಕೂಡಾ ಮಕ್ಕಳಿಗೆ ಧೈರ್ಯ ತುಂಬಬೇಕು. ಸೂಕ್ಷ್ಮ ಮನಸ್ಸಿನ ಅವರಿಗೆ ಅಕ್ಕರೆಯಿಂದ ಆತ್ಮಸ್ಥೈರ್ಯ ಮೂಡಿಸಬೇಕು ಎಂದು ಕುಮಾರಸ್ವಾಮಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
Follow us on Social media