ಬೆಂಗಳೂರು: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದೆ.
ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು.
ಈ ವರ್ಷ ಒಟ್ಟಾರೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಪ್ರಮಾಣ ಶೇಕಡಾ 61.80 ಆಗಿದೆ. ಕಳೆದ ವರ್ಷಕ್ಕಿಂತ ಶೇಕಡಾ 0.7ರಷ್ಟು ಫಲಿತಾಂಶ ಹೆಚ್ಚಾಗಿದ್ದು ಕಳೆದ ವರ್ಷ ಶೇಕಡಾ 61.73 ಫಲಿತಾಂಶ ಬಂದಿತ್ತು.ಶೇಕಡಾ 55.29ರಷ್ಟು ಫಲಿತಾಂಶ ಗಳಿಸಿ ಹುಡುಗಿಯರೇ ಮೇಲಗೈ ಸಾಧಿಸಿದ್ದಾರೆ. ರಾಜ್ಯದಲ್ಲಿ ತೇರ್ಗಡೆ ಹೊಂದಿದ ಒಟ್ಟಾರೆ ಹುಡುಗರ ಸಂಖ್ಯೆ ಶೇಕಡಾ 54.77. ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಎಸ್ ಎಂ ಎಸ್ ಮೂಲಕ ಫಲಿತಾಂಶ ಕಳುಹಿಸಲಾಗಿದೆ. ಅಲ್ಲದೆ ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನದಲ್ಲಿದ್ದರೆ ದಕ್ಷಿಣ ಕನ್ನಡ ದ್ವಿತೀಯ ಮತ್ತು ಕೊಡಗು ತೃತೀಯ ಸ್ಥಾನದಲ್ಲಿವೆ. ಚಿತ್ರದುರ್ಗ, ರಾಯಚೂರು ಮತ್ತು ವಿಜಯಪುರಗಳು ಕೊನೆಯ ಸ್ಥಾನದಲ್ಲಿವೆ. ಬೆಂಗಳೂರು ನಗರ ಮತ್ತು ಬೆಂಗಳೂರು ಉತ್ತರ 6 ಮತ್ತು ಏಳನೇ ಸ್ಥಾನದಲ್ಲಿವೆ ಎಂದು ಅವರು ಮಾಹಿತಿ ನೀಡಿದರು.
ಈ ವರ್ಷ ಒಟ್ಟು 5 ಲಕ್ಷದ 56 ಸಾವಿರದ 267 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 3 ಲಕ್ಷದ 84 ಸಾವಿರದ 947 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ವರ್ಷ ಶೇಕಡಾ 47.56 ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ತೇರ್ಗಡೆ ಹೊಂದಿದ್ದು, ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಲ್ಲಿ ಶೇಕಡಾ 72.45ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆ:ಫಲಿತಾಂಶದಲ್ಲಿ ಅನುತ್ತೀರ್ಣರಾದವರಿಗೆ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಪೂರಕ ಪರೀಕ್ಷೆ ನಡೆಸಲಾಗುವುದು. ಶುಲ್ಕ ಪಾವತಿಗೆ ಜುಲೈ 31 ಕೊನೆಯ ದಿನ ಎಂದರು. ಮರು ಮೌಲ್ಯಮಾಪನಕ್ಕೆ ಸಹ ಅವಕಾಶವಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಕೊರೋನಾ ವೈರಸ್ ಕಾರಣದಿಂದ ಈ ವರ್ಷ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಿಸುವುದಿಲ್ಲ ಎಂದು ತಿಳಿಸಿದರು.
Follow us on Social media