Breaking News

‘ದೇಶದ ಎಲ್ಲ ಕಡೆ ಸೋಲುತ್ತಿರುವ ಕಾಂಗ್ರೆಸ್‌ನ ಇಮೇಜ್ ಕತೆ ಏನು?’ – ಹೆಚ್‌ಡಿಕೆ ವ್ಯಂಗ್ಯ

ಬೆಂಗಳೂರು : ”ದೇಶದ ಎಲ್ಲ ಕಡೆ ಸೋಲುತ್ತಿರುವ ಕಾಂಗ್ರೆಸ್‌ನ ಇಮೇಜ್ ಕತೆ ಏನು?” ಎಂದು ಜೆಡಿಎಸ್‌ ನಾಯಕ ಹೆಚ್‌ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿ ಸರಣಿ ಟ್ವೀಟ್‌ ಮಾಡಿರುವ ಅವರು, ”ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದ ವೇಳೆ ಜೆಡಿಎಸ್‌ನ ಜಾತ್ಯತೀತತೆ ಬಹಿರಂಗವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ & ಸಿದ್ದರಾಮಯ್ಯರ ದೃಷ್ಟಿಯಲ್ಲಿ ಜಾತ್ಯತೀತತೆ ಅಂದರೆ ಏನು? ಇದನ್ನು ಈ ವೇಳೆಯಲ್ಲಿ ತಿಳಿಯ ಬಯಸುತ್ತೇನೆ. ಕಾಂಗ್ರೆಸ್‌ನ ಅಪವ್ಯಾಖ್ಯಾನದಿಂದಲೇ ಇಂದು ಜಾತ್ಯತೀತೆಯನ್ನು ಅನುಮಾನಿಸಲಾಗುತ್ತಿದೆ” ಎಂದು ಹೇಳಿದ್ದಾರೆ.

”ಸಭಾಪತಿ ಅವಿಶ್ವಾಸ ನಿರ್ಣಯದ ವೇಳೆ ಬೆಂಬಲ ನೀಡುವಂತೆ ಕಾಂಗ್ರೆಸ್‌ನ ಯಾವ ನಾಯಕನೂ ಸೌಜನ್ಯಕ್ಕೂ ಜೆಡಿಎಸ್ ಬಳಿ ಚರ್ಚಿಸಿಲ್ಲ. ಹೀಗಿದ್ದೂ, ಜೆಡಿಎಸ್‌ನ ಜಾತ್ಯತೀತತೆಯ ಪರೀಕ್ಷೆ ನಡೆಯುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆ ದುರಹಂಕಾರದ್ದು. ಬೆಂಬಲ ಕೇಳದಿದ್ದರೂ ಬೆಂಬಲಿಸಲು ನಾವೇನು ಗುಲಾಮರಲ್ಲ. ಕಾಂಗ್ರೆಸ್ಸಿನ ದೌಲತ್ತೇ ಅದರ ದುಸ್ಥಿತಿಗೆ ಕಾರಣ” ಎಂದು ಕಾಂಗ್ರೆಸ್‌ ವಿರುದ್ದ ಕಿಡಿಕಾರಿದ್ದಾರೆ.

”ನಮ್ಮ ಧರ್ಮ, ದೇವರಲ್ಲಿ ಆಳ ನಂಬಿಕೆ ಹೊಂದಿಯೂ, ಎಲ್ಲರ ನಂಬಿಕೆಗಳನ್ನು ಗೌರವಿಸುವುದು, ಎಲ್ಲರನ್ನೂ ಸಮಾನವಾಗಿ ಕಾಣುವುದು” ದೇವೇಗೌಡರ ಜಾತ್ಯತೀತೆ ಎಂಬುದನ್ನು ಸಂದರ್ಭ ಸಿಕ್ಕಾಗ ಹೇಳಿದ್ದೇನೆ. ಆದರೆ ಕಾಂಗ್ರೆಸ್, ಸಿದ್ದರಾಮಯ್ಯರ ವ್ಯಾಖ್ಯಾನ ಇದಕ್ಕೆ ವಿರುದ್ಧವಾದ್ದು. ಜಾತಿಗಳನ್ನು ಒಡೆಯುವುದು, ಅನಗತ್ಯ ಓಲೈಕೆಯೇ ಅವರ ಜಾತ್ಯತೀತತೆ” ಎಂದಿದ್ದಾರೆ.

”ಒಳ್ಳೆ ಇಮೇಜ್ ಅನ್ನು ಚುನಾವಣೆ ಮತ್ತು ಸ್ಥಾನಗಳಿಕೆ ಮೇಲೆ ಲೆಕ್ಕ ಹಾಕಿದ್ದಾರೆ ಸಿದ್ದರಾಮಯ್ಯನವರು. ಹಾಗಾದರೆ ದೇಶದ ಎಲ್ಲ ಕಡೆ ಸೋಲುತ್ತಿರುವ ಕಾಂಗ್ರೆಸ್‌ನ ಇಮೇಜ್ ಕತೆ ಏನು? 2018ರ ಚುನಾವಣೆಯಲ್ಲಿ 120 ರಿಂದ 80ಕ್ಕೆ ಕುಸಿದ, ಸ್ವತಃ ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯನವರಿಗೆ ಇಮೇಜ್ ಇತ್ತೇ? ಇಮೇಜ್ ಇರುವುದು ನಮ್ಮ ಒಳ್ಳೆತನದಲ್ಲಿ” ಎಂದು ಹೇಳಿದ್ದಾರೆ.

”ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂಬ ಕಾಂಗ್ರೆಸ್ಸಿಗರ ಸವಕಲು ಆರೋಪಕ್ಕೆ ಈ ಹಿಂದೆಯೇ ಉತ್ತರ ನೀಡಿದ್ದೇನೆ. ಈಗಲೂ ಹೇಳುತ್ತೇನೆ. ಕಾಂಗ್ರೆಸ್ಸೇ ಜೆಡಿಎಸ್‌ನ ಬಿ ಟೀಂ. ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಪಕ್ಕದಲ್ಲಿ ಆವರಣ (ಬ್ರಾಕೆಟ್) ಹಾಕಿ ಅದರಲ್ಲಿ ಜೆಡಿಎಸ್ ಎಂದು ಬರೆದಾಗಷ್ಟೇ ಅದರ ಹೆಸರು ಪೂರ್ಣವಾಗುತ್ತದೆ. ಅಷ್ಟರ ಮಟ್ಟಿಗೆ ಅಲ್ಲಿ ಜೆಡಿಎಸ್ ಇದೆ” ಎಂದು ಹೇಳಿದ್ದಾರೆ.

”ಜೆಡಿಎಸ್‌‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಹೈಕಮಾಂಡ್ ಎಂದು ಹೇಳಿದ್ದಾರೆ ಸಿದ್ದರಾಮಯ್ಯ. ಅಂದರೆ ಹೈಕಮಾಂಡ್‌ನ ನಿರ್ಣಯ ತಮಗೆ ಇಷ್ಟವಿರಲಿಲ್ಲ ಎಂಬುವುದು ಸಿದ್ದರಾಮಯ್ಯ ಅವರ ಮಾತಿನಲ್ಲಿ ಧ್ವನಿಸುತ್ತಿರುವ ಅರ್ಥ. ಹೀಗಾಗಿಯೇ ಸಿದ್ದರಾಮಯ್ಯ ಸರ್ಕಾರ ಕೆಡವಿದರು. ಅದರ ಅಪವಾದ ಬೇರೆಯವರಿಗೆ ಬಳಿದರು” ಎಂದು ಆರೋಪಿಸಿದ್ದಾರೆ.

”ಜಾತ್ಯತೀತ ನಿಲುವಿನ ಬಗ್ಗೆ! ದೇವೇಗೌಡರ ಬದ್ದತೆ ಬಗ್ಗೆ ನಾವು ನಿಮ್ಮಿಂದ ಉಪದೇಶ ಕೇಳಬೇಕಿಲ್ಲ. ದೇವೇಗೌಡರ ಬದ್ಧತೆಯನ್ನು ಬಳಸಿಕೊಂಡು ಬ್ಲ್ಯಾಕ್ಮೇಲ್ ಮಾಡಿದ ಕಾಂಗ್ರೆಸ್ ಇವತ್ತು ಜೆಡಿಎಸ್ ನ ನಿಲುವನ್ನು ಪ್ರಶ್ನಿಸುವ ಯಾವ ನೈತಿಕತೆ ಉಳಿಸಿಕೊಂಡಿದೆ” ಎಂದು ಪ್ರಶ್ನಿಸಿದ್ದಾರೆ.

”ಇನ್ನು ಫೈವ್ ಸ್ಟಾರ್ ಸಂಸ್ಕೃತಿ ಬಗ್ಗೆ ರಾಗ ಎಳೆದಿದ್ದಿರಿ? ಫೈವ್ ಸ್ಟಾರ್ ಹಾಗೂ ಗುಡಿಸಲಿನಿಂದಲೂ ಅಧಿಕಾರ ನಡೆಸಿದ್ದೇನೆ.ಜನತೆಗೆ ನನ್ನಷ್ಟು ಸುಲಭವಾಗಿ ದಕ್ಕುವ ರಾಜಕಾರಣಿ ಮತ್ತೊಬ್ಬರಿಲ್ಲ ಎಂಬುವುದನ್ನು ನೆನಪಿಸಲು ಬಯಸುತ್ತೇನೆ” ಎಂದು ಹೇಳಿದ್ದಾರೆ.

”ನಿಮ್ಮ ತಾಳಕ್ಕೆ ಕುಣಿಯಲು ಜೆಡಿಎಸ್ ಗುಲಾಮಿ ಸಂಸ್ಕೃತಿಯ ಪಕ್ಷವಲ್ಲ ರಾಜ್ಯದ ಇಂದಿನ ರಾಜಕಾರಣದ ಅಯೋಮಯ ಸ್ಥಿತಿಗೆ ನಿಮ್ಮ ದ್ವಂದ್ವ ಹಾಗೂ ಇಬ್ಬಂದಿತನದ ನಿಲುವೇ ಕಾರಣ” ಎಂದಿ‌ದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×