ತುಮಕೂರು: ಕೊರೋನಾ ವೈರಸ್ ಗೆ ತಂದೆಯನ್ನು ಕಳೆದುಕೊಂಡ 15 ವರ್ಷದ ಬಾಲಕನಿಗೆ ಶಾಲೆಯಲ್ಲಿ ಟ್ಯೂಷನ್ ಫೀಸ್ 5 ಸಾವಿರ ರೂಪಾಯಿ ಕಟ್ಟಲಿಲ್ಲವೆಂದು ಶಾಲಾ ಸಿಬ್ಬಂದಿ ಹೊಡೆದ ಪ್ರಕರಣ ನಡೆದಿದೆ.
ತುಮಕೂರು ಜಿಲ್ಲೆಯ ಪಾವಗಡದ ಬಳ್ಳಾರಿ ರಸ್ತೆಯಲ್ಲಿರುವ ವಿನಾಯಕ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ತಾಲಾ ಶಾಲೆಯಲ್ಲಿ ಹೆಚ್ಚುವರಿ ಕೋಚಿಂಗ್ ತೆಗೆದುಕೊಳ್ಳುತ್ತಿದ್ದಾರೆ, ಕಲಿಯೋಣವೆಂದು ಹೋದಾಗ ಈ ಘಟನೆ ನಡೆದಿದೆ.
ಹಿಂದಿ ಶಿಕ್ಷಕ ರಾಮಕೃಷ್ಣ ನಾಯಕ್ ನಾನು ಕಲಿಯುವುದರಲ್ಲಿ ಮುಂದಿಲ್ಲ ಎಂದು ದೂರಿದಾಗ ಎಲ್ಲ ಮಕ್ಕಳೆದುರು ಶಾಲೆಯ ಸೆಕ್ರೆಟರಿ ಅಶ್ವಥ್ ನಾರಾಯಣ ನನಗೆ ಕೋಲಿನಿಂದ ಹೊಡೆದರು. ಅವರು ನನಗೆ ದಿನನಿತ್ಯ ಟ್ಯೂಷನ್ ಫೀಸ್ ಕಟ್ಟಲಿಲ್ಲವೆಂದು ಹೊಡೆಯುತ್ತಿದ್ದರು ಎಂದು ನೊಂದ ಬಾಲಕ ಹೇಳುತ್ತಾನೆ.
ಟ್ಯೂಷನ್ ಫೀಸ್ ಕಟ್ಟಬೇಕೆಂಬ ಒತ್ತಡದಿಂದ ನನಗೆ ಕಲಿಕೆ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ತಾಲಾ ಹೇಳುತ್ತಾನೆ. ಈತನ ತಂದೆ ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ತಾಯಿ ಫರ್ಜಾನಾ ಬೇಗಂ ಮತ್ತು ಹಿರಿಯ ಸೋದರ ಮೊಹಮ್ಮದ್ ಟೌಫೀಕ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಕೊರೋನಾ ಸೋಂಕಿನಿಂದ ಕುಟುಂಬ ಆಸ್ಪತ್ರೆ ಬಿಲ್ ಐದೂವರೆ ಲಕ್ಷ ಪಾವತಿಸಿತ್ತು ಎಂದು ತಿಳಿದುಬಂದಿದೆ.
ತಂದೆ ತೀರಿಹೋದ ನಂತರ ಕುಟುಂಬ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವುದರಿಂದ ಬಾಲಕನ ಶಾಲೆಯ ಫೀಸ್ ನ್ನು ಮನ್ನಾ ಮಾಡಿ ಎಂದು ಸ್ಥಳೀಯ ಮುಖಂಡರು ಶಾಲೆಯ ಸೆಕ್ರೆಟರಿಗೆ ಹೇಳಿದ್ದರು. ಇದರಿಂದ ಅವರಿಗೆ ಸಿಟ್ಟು ಬಂದು ಹೊಡೆದಿದ್ದಾರೆ ಎಂದು ಫರ್ಜಾನಾ ಬ್ಲಾಕ್ ಶಿಕ್ಷಣ ಅಧಿಕಾರಿಗೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ನಿನ್ನೆ ಶಾಲೆಗೆ ಭೇಟಿ ನೀಡಿದ ಬ್ಲಾಕ್ ಸಂಪನ್ಮೂಲ ಸಮನ್ವಯ ಅಧಿಕಾರಿ ಪವನ್ ಕುಮಾರ್, ತಾನು ಬಾಲಕನಲ್ಲಿ, ಉಳಿದ ವಿದ್ಯಾರ್ಥಿಗಳಲ್ಲಿ ಮತ್ತು ಶಾಲಾ ಸೆಕ್ರೆಟರಿಯಲ್ಲಿ ಮಾತನಾಡಿದ್ದೇನೆ. ಆತನ ಕೈ ಮತ್ತು ಕಾಲಿನಲ್ಲಿ ಗಾಯವಾಗಿದೆ. ಬ್ಲಾಕ್ ಶಿಕ್ಷಣ ಅಧಿಕಾರಿ ಮುಂದೆ ವರದಿ ಸಲ್ಲಿಸಲಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಶಾಲೆಯ ಸೆಕ್ರೆಟರಿ ತಮ್ಮ ಕೃತ್ಯಕ್ಕೆ ಕ್ಷಮೆ ಕೇಳಿದ್ದಾರೆ ಎಂದು ತಿಳಿದುಬಂದಿದೆ.
Follow us on Social media