ತುಮಕೂರು: ಕುರಿ ಮೇಯಿಸುತ್ತಿದ್ದ ವ್ಯಕ್ತಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತ ಮೇಯಿಸುತ್ತಿದ್ದ 50 ಕುರಿಗಳಿಗೂ ಕೊರೊನಾ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗೊಲ್ಲರಹಟ್ಟಿ ಗ್ರಾಮದ ಕುರಿ ಮೇಯಿಸುತ್ತಿದ್ದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಹಾಗಾಗಿ ಆತನ 50 ಕುರಿಗಳನ್ನು ಪ್ರತ್ಯೇಕವಾಗಿರಿಸಿ ಅವುಗಳ ಗಂಟಲು ದ್ರವ ಸಂಗ್ರಹಿಸಿ ಭೂಪಾಲ್ ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿ ತಪಾಸಣೆ ಮಾಡಿಸಲು ನಿರ್ಧರಿಸಲಾಗಿದೆ.
ಇಲ್ಲಿಯವರೆಗೂ ಕೊರೊನಾ ಕುರಿಯ ಮೂಲಕ ಹರಡಿದೆ ಎಂಬುದಕ್ಕೆ ಸಾಕ್ಷ್ಯವಿಲ್ಲ. ಆದರೂ ಕೊರೊನಾ ವಿಭಿನ್ನ ಸ್ವರೂಪದಲ್ಲಿರುವುದರಿಂದ ಕುರಿಗಳ ದ್ರವವನ್ನು ತೆಗೆದು ಪರೀಕ್ಷಿಸಲು ಸೂಚಿಸಲಾಗಿದೆ ಎಂದು ಸಚಿವ ಜೆಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಕಂಟೈನ್ಮೆಂಟ್ ವಲಯದಲ್ಲಿರುವ ಪ್ರತಿಯೊಬ್ಬರಿಗೂ ಕೋವಿಡ್ ತಪಾಸಣೆ ನಡೆಸಬೇಕು. ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಸೋಂಕು ನಿಯಂತ್ರಣಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಜಿಲ್ಲೆಯಲ್ಲಿ ಮನೆಮನೆಗೆ ತೆರಳಿ ಆರೋಗ್ಯ ಸಮೀಕ್ಷೆಯನ್ನು ಮತ್ತೊಮ್ಮೆ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
Follow us on Social media