ಬೆಂಗಳೂರು: ಕ್ವಾರೆಂಟೈನ್ ಮಾರ್ಗಸೂಚಿ ಉಲ್ಲಂಘಿಸಿ ತಲೆತಪ್ಪಿಸಿಕೊಂಡಿದ್ದ ಡ್ರೋನ್ ಪ್ರತಾಪ್ ಮೈಸೂರಿನಲ್ಲಿ ಪೊಲೀಸರಿಗೆ ಸೆರೆಸಿಕ್ಕಿದ್ದು, ಬೆಂಗಳೂರಿಗೆ ಕರೆತರಲಾಗಿದೆ.
ಕೊರೋನಾ ಸಂಬಂಧ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪ್ರತಾಪ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ತಲಘಟ್ಟಪುರ ಪೊಲೀಸರು ಆತನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ.
ಹೈದ್ರಾಬಾದ್ ನಿಂದ ವಾಪಸ್ಸಾಗಿದ್ದ ಪ್ರತಾಪ್, ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಜು.16ರಂದು ಸುದ್ದಿ ವಾಹಿನಿಯೊಂದರ ಸಂದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ. ನಂತರ ನಿಯಮ ಉಲ್ಲಂಘಿಸಿದ್ದ ಅವರು ಮನೆಯಲ್ಲಿರದೇ ಮೊಬೈಲ್ ಸ್ವಿಚ್ಛ ಆಫ್ ಮಾಡಿಕೊಂಡಿದ್ದರು. ಹೀಗಾಗಿ ಪಶುವೈದ್ಯ ಮತ್ತು ವಿಧಿವಿಜ್ಞಾನ ತಜ್ಞ ಡಾ. ಎಚ್.ಎಸ್. ಪ್ರಯಾಗ್ ಅವರು ತಲಘಟ್ಟಪುರ ಠಾಣೆಗೆ ದೂರು ನೀಡಿದ್ದರು.
ನಂತರ ಮೂರು ತಂಡಗಳನ್ನು ರಚಿಸಿ ಪ್ರತಾಪ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಪ್ರತಾಪ್ ಸಾಧನೆ ಬಗ್ಗೆಯೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಮೈಸೂರಿನ ಸಂಬಂಧಿಕರೊಬ್ಬರ ಮನೆಯಲ್ಲಿ ಪ್ರತಾಪ್ ತಂಗಿದ್ದ.
ಪ್ರತಾಪ್ ಅವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿ, ನಂತರವೇ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.