ಬೆಂಗಳೂರು: ಕೊರೋನಾ ಹಾವಳಿ ಹಾಗೂ ಹೊಸ ರೂಂಪಾಂತರಿ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓಮಿಕ್ರಾನ್ ಹೊಸ ತಳಿಯ ಬಗ್ಗೆ ಪ್ರಾಥಮಿಕ ವರದಿ ರಾಜ್ಯ ಸರ್ಕಾರ ಕೈ ತಲುಪಿದೆ. ಆದರೂ ಸಹ ಒಂದು ಪೂರ್ಣ ಪ್ರಮಾಣದ ವರದಿ ತೆಗೆದುಕೊಳ್ಳುವ ಸಂಬಂಧ ಆರೋಗ್ಯ ಇಲಾಖೆಗೆ ಸೂಚಿಸಿದ್ದೇನೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ರೂಪಾಂತರಿ ಕಾಣಿಸಿಕೊಂಡಿರುವ ವ್ಯಕ್ತಿಗಳ ಚಿಕಿತ್ಸೆಗಾಗಿ ಕೈಗೊಳ್ಳಲಾಗಿರುವ ಕ್ರಮಗಳ ಮಾಹಿತಿ ಕಲೆ ಹಾಕುವಂತೆ ಹೇಳಿದ್ದೇನೆ. ಈಗಿರುವ ಮಾಹಿತಿ ಪ್ರಕಾರ ಬೇರೆ ಬೇರೆ ದೇಶಗಳಲ್ಲಿ ಡೆಲ್ಟಾಗಿರುವ ಚಿಕಿತ್ಸೆಯನ್ನೇ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಈ ಎಲ್ಲ ಮಾಹಿತಿಗಳನ್ನು ಗಣನೆಗೆ ತೆಗೆದುಕೊಂಡು ಹಾಗೂ ಕ್ರೋಢೀಕರಿಸುವುದರಿಂದ ವೈಜ್ಞಾನಿಕ ರೂಪದಲ್ಲಿ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಓಮಿಕ್ರಾನ್ ಪರಿಣಾಮದ ಬಗ್ಗೆ ಎಲ್ಲರೂ ಹೇಳುವಂತ ವೇಗವಾಗಿ ಹರಡುತ್ತದೆ. ಆದರೆ, ಪರಿಣಾಮಕಾರಿ ಇಲ್ಲ ಅಂತಾ ಹೇಳುತ್ತಾರೆ. ಈ ಎಲ್ಲ ಮಾಹಿತಿಗಳ ಆಧಾರದ ಮೇಲೆ ಪರೀಕ್ಷೆ ಮಾಡಬೇಕು. ಓಮಿಕ್ರಾನ್ ತೀವ್ರವಾಗಿ ಹರಡುವುದರಿಂದ ಸೋಂಕಿತರ ಪತ್ತೆ ಹಾಗೂ ಸರಿಯಾದ ಚಿಕಿತ್ಸೆ ನೀಡಬೇಕೆಂದು ಸೂಚಿಸಿದ್ದೇನೆ.
ಕ್ಲಸ್ಟರ್ ಹಂತ: ಇನ್ನು ಕ್ಲಸ್ಟರ್ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯದಲ್ಲಿ ಶಾಲೆ-ಹಾಸ್ಟೆಲ್ ಗಳಲ್ಲಿ ಮತ್ತು ಬೆಂಗಳೂರು ಅಪಾರ್ಟ್ ಮೆಂಟ್ ಗಳಲ್ಲಿ ಕೊರೋನಾ ಕ್ಲಸ್ಟರ್ ಗಳಾಗುತ್ತಿವೆ. ಬೆಂಗಳೂರಿನಲ್ಲಿ ಸುಮಾರು 10 ಕೇಸ್ ಬಂದರೆ ಕ್ಲಸ್ಟರ್ ಎಂದು ಹಿಂದೆ ಪರಿಗಣನೆ ಮಾಡಲಾಗುತ್ತಿತ್ತು. ಈಗ ಇದರಲ್ಲಿ ಬದಲಾವಣೆ ಮಾಡಲಾಗಿದ್ದು, ಅದನ್ನು 3 ಕೇಸ್ ಬಂದರೆ ಕ್ಲಸ್ಟರ್ ಎಂದು ಪರಿಗಣಿಸಬೇಕೆಂದು ಕ್ಲಸ್ಟರ್ ಮ್ಯಾನೇಜ್ ಮೆಂಟ್ ಗೆ ನಿನ್ನೆ ಸೂಚನೆ ಕೊಟ್ಟಿದ್ದೇನೆ. ಈ ಹಂತದಲ್ಲಿರುವವರಿಗೆ ಸಂಪೂರ್ಣ ಮಾದರಿಯ ಪರೀಕ್ಷೆ, ಚಿಕಿತ್ಸೆ, ಲಸಿಕೆ ನೀಡುವ ಕಾರ್ಯ ಮಾಡಬೇಕು. ಅಪಾರ್ಟ್ ಮೆಂಟ್ ವಾಸಿಯಾಗಿರುವ ಜನರು ಪದೇ ಪದೇ ಸಭೆ ಸೇರುತ್ತಾರೆ. ಇಂತಹವೊಂದು ಸಂದರ್ಭದಲ್ಲಿ ಲಸಿಕೆಯ ಎರಡು ಡೋಸ್ ಪಡೆದುಕೊಂಡವರು ಮಾತ್ರ ಸಭೆ ಸೇರಬೇಕು. ಹೊರಗಡೆಯವರಿಗೆ ಯಾವುದೇ ಕಾರಣಕ್ಕೂ ಈ ಸಭೆಯಲ್ಲಿ ಅವಕಾಶ ಕೊಡಬಾರದು ಎಂದು ಬಿಬಿಎಂಪಿ ಕಮಿಷನರ್ ಗೆ ಸೂಚನೆ ನೀಡಿದ್ದೇನೆ ಎಂದರು.
ಶಾಲಾ ಕಾಲೇಜಿನಲ್ಲಿ ಮಕ್ಕಳ ಪೋಷಕರಿಗೆ ಹಾಗೂ ಹಾಸ್ಟೆಲ್ ಗಳ ನರ್ಸಿಂಗ್, ಪ್ಯಾರಾಮೆಡಿಕಲ್ ನಲ್ಲಿ ಕಲಿಯುವ ಮಕ್ಕಳಿಗೆ ಲಸಿಕೆ ನೀಡಬೇಕು. ಡಬಲ್ ಡೋಸ್ ಡ್ರೈವ್ ಮಾಡಬೇಕು. ಎಲ್ಲಿಯೂ ಕೂಡ ಸಂಶಯಕ್ಕೆ ಎಡೆ ಮಾಡಿಕೊಡಬಾರದು ಎಂದು ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದರು.
ಸೋಂಕಿತ ಹತ್ತು ಜನರು ಮೊಬೈಲ್ ಸ್ವಿಚ್ ಮಾಡಿಕೊಂಡಿದ್ದಾರೆ ಎಂಬ ವಿಚಾರದ ಬಗ್ಗೆ ಆರೋಗ್ಯ ಸಚಿವರಿಂದ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಸಿಎಂ ಹೇಳಿದರು.
ಇನ್ನು ಬೆಳಗಾವಿ ಅಧಿವೇಶನದ ಬಗ್ಗೆ ಮಾತನಾಡಿದ ಸಿಎಂ, ಅಧಿವೇಶನದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಸ್ಯಾನಿಟೈಸೇಷನ್, ಡಬಲ್ ಡೋಸ್ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದರು.
Follow us on Social media