ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೇಲಿನ ಸಿಟ್ಟಿಗೆ ಕಾಂಗ್ರೆಸ್ ವಿರುದ್ಧ ಬಂಡಾಯ ಸಾರಿ ಬಿಜೆಪಿ ಸೇರಿ, ಚುನಾವಣೆ ಎದುರಿಸಿ, ಅವರು ಹೊಂದಿದ್ದ ಜಲ ಸಂಪನ್ಮೂಲ ಖಾತೆಯನ್ನೇ ಪಡೆಯುವಲ್ಲಿ ಯಶಸ್ವಿಯಾಗಿದ್ದ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಈಗ ಡಿ.ಕೆ. ಶಿವಕುಮಾರ್ ಅವರ ಮನೆ ಪಕ್ಕವೇ ಮನೆ ಖರೀದಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಡಿದೆದ್ದು ಪಕ್ಷ ಬಿಟ್ಟು ಬಿಜೆಪಿ ಸೇರಿದ ರಮೇಶ ಜಾರಕಿಹೊಳಿ ಅವರು ಶಿವಕುಮಾರ್ ನಿರ್ವಹಿಸುತ್ತಿದ್ದ ಜಲಸಂಪನ್ಮೂಲ ಖಾತೆಗೆ ಪಟ್ಟು ಹಿಡಿದು ಪಡೆಯುವಲ್ಲಿ ಯಶಸ್ವಿಯಾದರು. ಬಳಿಕ ಶಿವಕುಮಾರ್ ವಾಸ್ತವ್ಯವಿದ್ದ ಸರ್ಕಾರಿ ಬಂಗಲೆಗೂ ಬೇಡಿಕೆ ಇಟ್ಟಿದ್ದರು .
ಇದೀಗ ಬೆಂಗಳೂರಿನ ಪ್ರತಿಷ್ಠಿತ ಪ್ರದೇಶವಾದ ಸದಾಶಿವನಗರದಲ್ಲಿ ಡಿ.ಕೆ.ಶಿವಕುಮಾರ್ ಮನೆಯ ಹಿಂದಿನ ರಸ್ತೆಯಲ್ಲಿ ಸುಮಾರು 100 ಮೀಟರ್ ಅಂತರದಲ್ಲಿಯೇ ಸಚಿವ ರಮೇಶ್ ಜಾರಕಿಹೊಳಿ ಮನೆ ಖರೀದಿ ಮಾಡಿದ್ದು, ಶುಕ್ರವಾರ ಅಧಿಕೃತ ಗೃಹ ಪ್ರವೇಶ ಮಾಡಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಾಗೂ ಚುನಾವಣೆಯಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಿದ್ದ ತಮ್ಮ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಪಾಲ್ಗೊಂಡಿದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು.
Follow us on Social media