Breaking News

ಡಿಕೆಶಿ ಮಾತಿಗೆ ನಾವು ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ: ಸಚಿವ ಆರ್ ಅಶೋಕ್

ಬೆಂಗಳೂರು: ನಿನ್ನೆ ನೈಸ್‌ ರಸ್ತೆಯಲ್ಲಿ 5000ಕ್ಕೂಹೆಚ್ಚು ಕೂಲಿ ಕಾರ್ಮಿಕರು ಅಲ್ಲಿ ಜಮಾವಣೆಯಾಗಿದ್ದರು. ಅವರನ್ನು ಬಲವಂತವಾಗಿ ತಡೆಹಿಡಿಯಲಾಗಿದೆ ಎಂಬ ಸುಳ್ಳು ಸುದ್ದಿ ಹರಡಿತ್ತು. ನಾವು ಯಾರನ್ನೂ ಕೂಡಿಕಾಕಿಲ್ಲ. ಬೇರೆ ರಾಜ್ಯಗಳಿಗೆ ಹೋಗುವ ಯಾರನ್ನೂ ತಡೆಯುವುದಿಲ್ಲ. ತಡೆಯುವ ಪ್ರಯತ್ನವನ್ನೂ ಮಾಡಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಲ್ಲಿಗೆ ಬಂದ ಕಾರ್ಮಿಕರು ಫ್ಯಾಕ್ಟರಿ ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದು, ಅವರಲ್ಲಿ ಬಹಳಷ್ಟು ತುಮಕೂರಿನ ವಿಮಲ್ ಎಂಬ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ವೇತನ ಕೊಟ್ಟಿಲ್ಲ ಎಂದು ಅವರು ಅಲ್ಲಿಂದ ಬಂದಿದ್ದರು. ಈ ವಿಷಯ ತಿಳಿದ ತಕ್ಷಣ ನಾವು ಕಾರ್ಖಾನೆಯ ಮಾಲೀಕರನ್ನು ಸಂಪರ್ಕಿಸಿದ್ದೆವು. ಆಗ ಅವರು ಇಂದು ಸಂಜೆಯೊಳಗೆ ಪ್ರತಿಯೊಬ್ಬರಿಗೂ 20 ಸಾವಿರ ರೂ. ವೇತನ ನೀಡುವುದಾಗಿ ಭರವಸೆ ನೀಡಿದರು. ಅದರಂತೆ ಅವರು ತುಮಕೂರಿಗೆ ಹೋಗಿದ್ದಾರೆ. ಇನ್ನು ಕೆಲವರು ತಮ್ಮ ಊರುಗಳಿಗೆ ಹೋದರೆ 14 ದಿನ ಕ್ವಾರಂಟೈನ್‌ನಲ್ಲಿರಬೇಕಾಗುತ್ತದೆ ಎಂಬ ಆತಂಕದಿಂದ ಕೆಲವರು ಇಲ್ಲೇ ಉಳಿದಿದ್ದಾರೆ. ಹಾಗಾಗಿ ಕೆಲಸ ಆರಂಭವಾದರೆ ಕೆಲಸಕ್ಕೆ ಹಾಜರಾಗುತ್ತೇವೆ. ಅಲ್ಲಿಯವರೆಗೆ ಇಲ್ಲಿಯೇ ಇರುತ್ತೇವೆ ಎಂದು ಕಾರ್ಮಿಕರು ಹೇಳಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರ ಇಲ್ಲಿನ ಕಾರ್ಮಿಕರನ್ನು ವಾಪಸ್ ಕರೆಸಿಕೊಳ್ಳಲು ಒಪ್ಪಿಲ್ಲ. ಯಾರನ್ನೂ ಈ ಸಂದರ್ಭದಲ್ಲಿ ರಾಜ್ಯಕ್ಕೆ ಕರೆಸಿಕೊಳ್ಳಲು ಸಿದ್ಧವಿಲ್ಲ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿದೆ. ಆಯಾ ರಾಜ್ಯ ಸರ್ಕಾರಗಳು ಒಪ್ಪಿಗೆ ಕೊಡಬೇಕು ಎಂಬ ಕೇಂದ್ರ ಸರ್ಕಾರದ ಮಾರ್ಗಸೂಚಿಯೂ ಇವೆ. ರಾಜ್ಯದಿಂದ 9600 ಜನ ಈಗಾಗಲೇ ರೈಲಿನ ಮೂಲಕ ಓರಿಸ್ಸಾ, ಬಿಹಾರ್, ಜಾರ್ಖಂಡ್ ರಾಜಸ್ಥಾನ, ಉತ್ತರ ಪ್ರದೇಶ ರಾಜ್ಯಗಳಿಗೆ ಕಾರ್ಮಿಕರು ಹೋಗಿದ್ದಾರೆ. ನಿನ್ನೆ ಸಂಜೆಯವರೆಗೆ 86 ಸಾವಿರ ಕಾರ್ಮಿಕರು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಬೆಂಗಳೂರಿನಿಂದ ಹೋಗಿದ್ದಾರೆ. ನಾಳೆ ಕೂಡ ಉಚಿತವಾಗಿ ಹೋಗಲು ಅನುಮತಿ ನೀಡಲಾಗಿದೆ ಎಂದರು.

ಸೇವಾ ಸಿಂಧು ಮೂಲಕ ಬಿಹಾರದ 52,036, ಜಾರ್ಖಂಡ್‌ 16,364, ಒಡಿಸ್ಸಾ 12657, ರಾಜಸ್ತಾನ 18320, ಉತ್ತರ ಪ್ರದೇಶ 34,508, ಕೇರಳ 12,033, ಪಶ್ಚಿಮ ಬಂಗಾಳದ 18,800 ಜನರು ಕೂಡ ತಮ್ಮ ರಾಜ್ಯಕ್ಕೆ ಹೋಗಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಊರಿಗೆ ತೆರಳಲು ಇಚ್ಛೆ ಪಟ್ಟವರನ್ನು ಮಾತ್ರ ಕಳುಹಿಸಲಾಗುತ್ತಿದೆ. ಯಾತ್ರಾರ್ಥಿಗಳು, ವಿದ್ಯಾರ್ಥಿಗಳನ್ನು ಕಳುಹಿಸಿಕೊಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಆದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆಯೇ ಹೊರತು ಯಾರನ್ನೂ ಬಲವಂತದಿಂದ ಊರಿಗೆ ಕಳುಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಶೇಷ ರೈಲು ರದ್ದುಪಡಿಸಿದ್ದಕ್ಕೆ ಸ್ಪಷ್ಟನೆ ನೀಡಿದ ಅಶೋಕ, ಮೊದಲು ಕಾರ್ಮಿಕರು ಊರಿಗೆ ತೆರಳುತ್ತೇವೆ ಎಂದು ಹೇಳಿದ್ದರು. ಆದರೆ 14 ದಿನಗಳ ಕಾಲ ಕ್ವಾರಂಟೈನ್ ಇರಬೇಕು ಎಂಬುದನ್ನು ತಿಳಿದ ಬಳಿಕ ಅವರು ಊರಿಗೆ ತೆರಳಲು ಹಿಂದೇಟು ಹಾಕಿದರು. ಆದ್ದರಿಂದ ವಿಶೇಷ ರೈಲು ಅನ್ನು ರದ್ದುಪಡಿಸಲಾಗಿದೆ ಎಂದು ಹೇಳಿದರು. ಬೇರೆ ರಾಜ್ಯಗಳಲ್ಲಿರುವ ಕನ್ನಡಿಗರು ಕರ್ನಾಟಕಕ್ಕೆ ಬರಬಹುದು. ಹೊರದೇಶದಿಂದ ಬರುವವರಿಗೂ ಅವಕಾಶ ಕಲ್ಪಿಸಲಾಗುತ್ತಿದೆ. ಬಂದವರೆಲ್ಲರೂ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗುವುದು, ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವವರಿಗೆ ಸ್ಪಲ್ಪ ನಿರ್ಬಂಧಗಳು ಜಾಸ್ತಿ ಇರಲಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಲಾಕ್‌ ಡೌನ್‌ ಸಂದರ್ಭದಲ್ಲಿ ದೇಶ ಒಟ್ಟಾಗಿ ನಿಂತಿದೆ, ಒಟ್ಟಾಗಿ ಸೋಂಕಿನ ವಿರುದ್ಧ ಹೋರಾಟ ಮಾಡುತ್ತಿದೆ. ದೇಶದ ಕಾನೂನು ಪ್ರಕಾರ ಪ್ರತಿಯೊಂದು ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ದೇಶನ ನೀಡುತ್ತದೆ. ವಿಧಾನಸಭೆ ಅಧಿವೇಶನ ನಡೆಸುವುದರ ಬಗ್ಗೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಕೊರೋನಾ ನಿಯಂತ್ರಿಸಲು ಮೊದಲು ಆದ್ಯತೆ ನೀಡಲಾಗುತ್ತಿದೆ. ಶಿವಕುಮಾರ್ ಅವರು ಹೊಸದಾಗಿ ಅಧ್ಯಕ್ಷರಾಗಿ ನೇಮಕ ಆಗಿದ್ದಾರೆ. ಅವರಿಗೆ ಬಹಳಷ್ಟು ಆಸೆಗಳಿವೆ, ಹೊಸದಾಗಿ ಮದುವೆಯಾದವರಿಗೆ ಎಲ್ಲೆಲ್ಲಾ ಹೋಗಬೇಕು ಎಂಬ ಆಸೆ ಇರುತ್ತದೆ. ಅದೇ ರೀತಿ ಶಿವಕುಮಾರ್‌ ಅವರಿಗೂ ಆಸೆಗಳಿವೆ. ಡಿ.ಕೆ.ಶಿವಕುಮಾರ್ ತುಂಬಾ ಸ್ಮಾರ್ಟ್, ಆದರೆ ಓವರ್ ಸ್ಮಾರ್ಟ್ ಆಗಬಾರದು, ಡಿಕೆಶಿ ಮಾತಿಗೆ ನಾವು ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ. ಅವರಿಂದ ಬಲಿಷ್ಠರಾಗಿರುವ ಯಡಿಯೂರಪ್ಪ ಇದ್ದಾರೆ. ಹಣ ಕೊಡಬೇಕು ಎಂದು ಇದ್ದರೆ ಅವರು ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೆ ಇಪ್ಪತ್ತು ಸಾವಿರ ನೀಡಲಿ, ಜನರಿಗೆ ಸಹಾಯ ಆಗುತ್ತದೆ. ಆದರೆ ಡಿ.ಕೆ. ಶಿವಕುಮಾರ್ ಅವರೇ ನಿಮ್ಮ ಅಕ್ಕ – ಪಕ್ಕದಲ್ಲಿ ಸಿದ್ದರಾಮಯ್ಯ ಮತ್ತು ಜಿ. ಪರಮೇಶ್ವರ್ ಇದ್ದಾರೆ ಎಂಬುದನ್ನು ಮರೆಯಬೇಡಿ ಎಂದು ಅಶೋಕ್ ಟಾಂಗ್ ನೀಡಿದರು.

ಡಿಕೆಶಿ ನೀಡಿದ ಚೆಕ್‌ ನಲ್ಲಿ ಡಿ ಕೆ ಶಿವಕುಮಾರ್ ಅವರ ಸಹಿ ಇಲ್ಲ, ಅದರಲ್ಲಿ ದಿನೇಶ್ ಗುಂಡೂರಾವ್ ಅವರ ಸಹಿ ಇದೆ. ಇನ್ನೂ ಅವರಿಗೆ ಸಹಿ ಹಾಕುವ ಅಧಿಕಾರ ಸಿಕ್ಕಿಲ್ಲ ಎಂದು ಅಶೋಕ್ ವ್ಯಂಗ್ಯವಾಡಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×