ಬೆಂಗಳೂರು: ವಲಸೆ ಕಾರ್ಮಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂದು ವಿಪಕ್ಷಗಳು ಹಾರಿಹಾಯ್ದಿದ್ದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಇದೀಗ ವಲಸೆ ಕಾರ್ಮಿಕರಿಗಾಗಿ ಉಚಿತವಾಗಿ 3 ದಿನಗಳ ಕಾಲ ಕೆಎಸ್ಆರ್ಟಿಸಿ ಬಸ್ ಓಡಿಸಲು ಅವಕಾಶ ಮಾಡಿಕೊಟ್ಟಿದೆ.
ದುಬಾರಿ ಬಸ್ ದರದಿಂದಾಗಿ ಕೆಲಸವಿಲ್ಲದ ಕೂಲಿ ಕಾರ್ಮಿಕರು ಪರದಾಡುವಂತಾಗಿತ್ತು. ಇನ್ನು ನಿನ್ನೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರು ಮೆಜೆಸ್ಟಿಕ್ ಗೆ ಹೋಗಿ ಅಲ್ಲಿದ್ದ ವಲಸೆ ಕಾರ್ಮಿಕರ ಜೊತೆ ಮಾತನಾಡಿದ್ದರು. ನಂತರ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಹಾರಿಹಾಯ್ದಿದ್ದರು. ಭಿಕ್ಷೆ ಎತ್ತಿ ಬೇಕಾದರೂ ನಾನು ಹಣವನ್ನು ನೀಡುತ್ತೇನೆ. ಕಾರ್ಮಿಕರನ್ನು ಅವರ ಊರುಗಳಿಗೆ ಹೋಗುವುದಕ್ಕೆ ಅನುವು ಮಾಡಿಕೊಡಿ ಎಂದು ಆಗ್ರಹಿಸಿದ್ದರು.
ಇದೀಗ ರಾಜ್ಯ ಸರ್ಕಾರ 3 ದಿನಗಳ ಕಾಲ ಉಚಿತವಾಗಿ ಕೆಎಸ್ಆರ್ಟಿಸಿ ಬಸ್ ಓಡಿಸಲು ಆದೇಶಿಸಿದೆ. ಅಲ್ಲದೆ ಕಾರ್ಮಿಕರಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನು ಮಾಡುತ್ತಿದೆ. ಇದೇ ವೇಳೆ ಕಾರ್ಮಿಕರ ಆರೋಗ್ಯವನ್ನು ತಪಾಸಣೆ ನಡೆಸಿ ಅವರ ಊರುಗಳಿಗೆ ಕಳುಹಿಸಿಕೊಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow us on Social media