ಸಿಡ್ನಿ: ಆರಂಭಿಕ ಆಟಗಾರರಾದ ಮೊಹಮ್ಮದ್ ರಿಜ್ವಾನ್ (Mohammad Rizwan) ಮತ್ತು ಬಾಬರ್ ಅಜಮ್ (Babar Azam) ಅಬ್ಬರದಾಟದ ಮುಂದೆ ಕಿವೀಸ್ ಮಂಕಾಗಿದೆ. ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ (New Zealand) ವಿರುದ್ಧ ಪಾಕಿಸ್ತಾನ (Pakistan) 7 ವಿಕೆಟ್ಗಳ ಅಂತರದ ಭರ್ಜರಿ ಜಯದೊಂದಿಗೆ ಪ್ರಶಸ್ತಿ ಸುತ್ತಿಗೇರಿದೆ.ನ್ಯೂಜಿಲೆಂಡ್ ನೀಡಿದ 153 ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಈ ಮೊತ್ತ ಸವಾಲಾಗಿ ಪರಿಣಮಿಸಲಿಲ್ಲ. ಆರಂಭಿಕ ಆಟಗಾರರಿಬ್ಬರೆ 105 ರನ್ ಜೊತೆಯಾಟವಾಡಿ ಪಾಕ್ಗೆ ಮೇಲುಗೈ ತಂದುಕೊಟ್ಟರು. ಆ ಬಳಿಕ ಅಂತಿಮವಾಗಿ ಪಾಕ್ 19.1 ಓವರ್ಗಳ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 153 ರನ್ ಸಿಡಿಸಿ ಜಯದ ನಗೆ ಬೀರಿತು.
ಇತ್ತ ಈ ಜಯದೊಂದಿಗೆ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂರನೇ ಬಾರಿ ಫೈನಲ್ಗೆ ಲಗ್ಗೆ ಇಟ್ಟಿದೆ. 2007ರಲ್ಲಿ ಪಾಕಿಸ್ತಾನ ರನ್ನರ್ ಅಪ್ ಆಗಿತ್ತು. 2009ರಲ್ಲಿ ಚಾಂಪಿಯನ್ ಆಗಿತ್ತು.ಪಾಕ್ ಪರ ಬ್ಯಾಟಿಂಗ್ನಲ್ಲಿ ಮಿಂಚಿದ ಬಾಬರ್ ಮತ್ತು ರಿಜ್ವಾನ್ ಭರ್ಜರಿ ಆರಂಭ ನೀಡಿದರು. 2022ರ ಟಿ20 ವಿಶ್ವಕಪ್ನಲ್ಲಿ ಮಂಕಾಗಿದ್ದ ಈ ಜೋಡಿ ಸೆಮಿಫೈನಲ್ನಲ್ಲಿ ಮೊದಲ ವಿಕೆಟ್ಗೆ 105 ರನ್ (76 ಎಸೆತ) ಸಿಡಿಸಿ ಮೈಚಳಿ ಬಿಟ್ಟು ಆಡಿತು. ಬಾಬರ್ ಅಜಮ್ 53 ರನ್ (42 ಎಸೆತ, 7 ಬೌಂಡರಿ) ಬಾರಿಸಿ ಔಟ್ ಆದರು. ಆ ಬಳಿಕ ರಿಜ್ವಾನ್ ಜೊತೆ ಸೇರಿಕೊಂಡ ಮೊಹಮ್ಮದ್ ಹ್ಯಾರಿಸ್ ಪಾಕಿಸ್ತಾನಕ್ಕೆ ಜಯ ತಂದುಕೊಟ್ಟರು ಎನ್ನುವಷ್ಟರಲ್ಲಿ ರಿಜ್ವಾನ್ 57 ರನ್ (43 ಎಸೆತ, 5 ಬೌಂಡರಿ) ಸಿಡಿಸಿ ವಿಕೆಟ್ ಕೈಚೆಲ್ಲಿಕೊಂಡರು. ನಂತರ ಹ್ಯಾರಿಸ್ 30 ರನ್ (26 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಗೆಲುವಿಗೆ 2 ರನ್ ಬೇಕಾಗಿದ್ದಾಗ ಔಟ್ ಆದರು. ಬಳಿಕ ಮಸೂದ್ 3 ರನ್ ಸಿಡಿಸಿ ಗೆಲುವಿನ ದಡ ಸೇರಿಸಿದರು.
ಈ ಮೂಲಕ ಲೀಗ್ ಹಂತದಲ್ಲೇ ಹೊರಬೀಳುವ ಸ್ಥಿತಿಯಲ್ಲಿದ್ದ ಪಾಕ್ ಅದೃಷ್ಟದಿಂದ ಸೆಮಿಫೈನಲ್ ಪ್ರವೇಶಿಸಿ ಇದೀಗ ಫೈನಲ್ ಹಂತಕ್ಕೆ ತೇರ್ಗಡೆಗೊಂಡಿದೆ.
Follow us on Social media