ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಜೂ. 20 ರಂದು ನಗರದ ನಾಗರಬಾವಿ ಸಮೀಪದ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದ (ಬೇಸ್) ನೂತನ ಕ್ಯಾಂಪಸ್ಸನ್ನು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಸೋಮವಾರ ಕ್ಯಾಂಪಸ್ಸಿಗೆ ಭೇಟಿ ನೀಡಿ, ಪೂರ್ವಸಿದ್ಧತೆ ಮತ್ತಿತರ ವ್ಯವಸ್ಥೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.
ಇದರೊಂದಿಗೆ ಟಾಟಾ ಸಮೂಹ ಸಂಸ್ಥೆಯ ಸಹಾಯದೊಂದಿಗೆ ನಾಲ್ಕೂವರೆ ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಉನ್ನತೀಕರಿಸಿರುವ 150 ಸರಕಾರಿ ಐಟಿಐ ಸಂಸ್ಥೆಗಳನ್ನು ಕೂಡ ಪ್ರಧಾನಿಗಳು ಈ ಕ್ಯಾಂಪಸ್ಸಿನಿಂದಲೇ ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಐಟಿಐ ಸಂಸ್ಥೆಯ ಮಾದರಿ ಪ್ರತಿಕೃತಿ ಮತ್ತು ಅತ್ಯಾಧುನಿಕ ಪ್ರಯೋಗಾಲಯದ ಮಾದರಿಗಳನ್ನು ಇಲ್ಲಿ ಸೃಷ್ಟಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರು ಮತ್ತಿತರ ಅಧಿಕಾರಗಳೊಂದಿಗೆ ಸಭೆ ನಡೆಸಿದರು. ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ಎಲ್ಲ ವ್ಯವಸ್ಥೆಯೂ ಸಮರ್ಪಕವಾಗಿರಬೇಕು. ಇದರಲ್ಲಿ ಯಾವುದೇ ಲೋಪದೋಷಗಳಿಗೆ ಆಸ್ಪದ ಕೊಡಬಾರದು. 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬೇಸ್ ಕ್ಯಾಂಪಸ್, ಎನ್ಇಪಿ ಅಳವಡಿಕೆ ದೃಷ್ಟಿಯಿಂದಲೂ ಗಮನ ಸೆಳೆಯುತ್ತಿದೆ. ಮೋದಿಯವರ ಭೇಟಿಯ ಸಂದರ್ಭದಲ್ಲಿ ಇದನ್ನು ಕೂಡ ಬಿಂಬಿಸಲು ಯೋಜಿಸಬೇಕು ಎಂದು ಅವರು ಹೇಳಿದರು.
ಐಟಿಐಗಳ ಲೋಕಾರ್ಪಣೆಗೆ ಮಾಡಿಕೊಂಡಿರುವ ವ್ಯವಸ್ಥೆಗಳನ್ನು ವೀಕ್ಷಿಸಿದ ಸಚಿವರು, ಪ್ರಯೋಗಾಲಯಗಳಲ್ಲಿ ಇರುವ ಆಧುನಿಕ ಸಾಧನಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
Follow us on Social media