Breaking News

ಜಾಮೀನಿನ ಮೇಲೆ ಹೊರಬಂದ ಪಾದರಾಯನಪುರ ದಾಂಧಲೆ ಆರೋಪಿಗಳಿಗೆ ಅದ್ದೂರಿ ಸ್ವಾಗತ

ಬೆಂಗಳೂರು: ಕೊರೋನಾ ಲಾಕ್ ಡೌನ್ ವೇಳೆ  ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ ಮೇಲೆ ಹಲ್ಲೆ, ದಾಂಧಲೆ ಮಾಡಿದ ಆರೋಪದಡಿ ಬಂಧಿತರಾಗಿ ಜಾಮೀನಿನ ಮೇಲೆ  ಹೊರಬಂದ ಆರೋಪಿಗಳನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ.

 ಕೋವಿಡ್ ಕರ್ತವ್ಯದಲ್ಲಿದ್ದ ಪೊಲೀಸರು ಮತ್ತು ಆರೋಗ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದಲ್ಲದೇ, ಜೆಜೆನಗರ ಠಾಣೆ ಪೊಲೀಸರ ಶೆಡ್ ಗಳನ್ನು ಧ್ವಂಸಗೊಳಿಸಿ ಅರ್ಭಟ ಮೆರೆದಿದ್ದ ಪುಂಡರಿಗೆ ನ್ಯಾಯಾಲಯ ಜಾಮೀನು ನೀಡಿದೆ. ಜಾಮೀನು ಪಡೆದು ಹೊರಬಂದವರನ್ನು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ತಮ್ಮದೇ ಬಸ್ ಗಳಲ್ಲಿ ಪಾದರಾಯನಪುರಕ್ಕೆ ಕರೆ ತಂದಿದ್ದಾರೆ. 

ಆರೋಪಿಗಳು ಬರುತ್ತಿದ್ದಂತೆ ಜಮೀರ್ ಅಹ್ಮದ್ ಕೈಮುಗಿದು ಅವರನ್ನು ಬರಮಾಡಿಕೊಂಡರು. ಈ ಮೂಲಕ  ತಾನು ಅವರ ಬೆಂಬಲಕ್ಕೆ ನಿಂತಿರುವುದಾಗಿ ಸ್ಪಷ್ಟಪಡಿಸಿದರು.  ಆರೋಪಿಗಳಲ್ಲರೂ ಮಾಸ್ಕ್ ಧರಿಸಿ ಬಸ್‌ನಿಂದ ಇಳಿದು ತಮ್ಮ ಮನೆಗಳಿಗೆ ತೆರಳಿದರು.

ಸೋಮವಾರವಷ್ಟೇ ಪಾದರಾಯನಪುರದಲ್ಲಿ ಗಲಾಟೆ ಮಾಡಿದವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಜಮೀರ್ ಅಹಮದ್ ಒಡೆತನದ  ನ್ಯಾಷನಲ್ ಟ್ರಾವೆಲ್ಸ್ ಬಸ್ ನಲ್ಲಿ ಮೈಸೂರು ರಸ್ತೆಯ ಹಳೇಗುಡ್ಡದ ಹಳ್ಳಿಯ  ಹಜ್ ಭವನಕ್ಕೆ ಕರೆತರಲಾಗಿದೆ. ಬಸ್ಸಿನಲ್ಲಿ ಬರುತ್ತಿದ್ದಂತೆ ಆರೋಪಿಗಳ ಕುಟುಂಬಸ್ಥರು ಅವರನ್ನು ಸ್ವಾಗತ ಕೋರಲು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ನೆರದಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಇನ್ನು, ಈ ಸಂದರ್ಭದಲ್ಲಿ ಜೆಜೆ ನಗರ ವಾರ್ಡ್ ಕಾರ್ಪೋರೇಟರ್ ಪತಿ ಅಲ್ತಾಫ್ ಕೂಡ ಉಪಸ್ಥಿತರಿದ್ದರು.

ಪ್ರಕರಣದಲ್ಲಿ ಶಾಮೀಲಾಗಿದ್ದ 126 ಆರೋಪಿಗಳಿಗೂ ಹೈಕೋರ್ಟ್ ಮೇ 29ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆರೋಪಿಗಳು 1 ಲಕ್ಷ ರೂ. ಬಾಂಡ್, ಶ್ಯೂರಿಟಿ ಒದಗಿಸಬೇಕು ಎಂದು ನ್ಯಾಯಾಧೀಶರಾದ ಜಾನ್ ಮೈಕೆಲ್ ಕುನ್ಹಾ ಅವರ ನೇತೃತ್ವದ ನ್ಯಾಯಪೀಠವು ಆದೇಶ ಹೊರಡಿಸಿತ್ತು.

ಹೀಗಾಗಿ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಹಳೇಗುಡ್ಡದಹಳ್ಳಿಯ ಹಜ್ ಭವನದಲ್ಲಿ ಆರೋಪಿಗಳನ್ನಿಟ್ಟು ಕೋವಿಡ್-19 ಪರೀಕ್ಷೆಗೊಳಪಡಿಸಿ, ಎಲ್ಲಾ ಪ್ರಕ್ರಿಯೆ ಬಳಿಕ ಬುಧವಾರ ಬಿಡುಗಡೆಗೊಳಿಸಲಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×