ಗೋಕಾಕ್: ಹಲವು ವಿಧಾನಸಭೆ ಚುನಾವಣೆಗಳಲ್ಲಿ ತಂತ್ರಗಾರಿಕೆ ರೂಪಿಸಿ ಕಾಂಗ್ರೆಸ್ ಗೆಲುವಿಗೆ ಕಾರಣಕರ್ತರಾದ ಸತೀಶ್ ಜಾರಕಿಹೊಳಿ ಈಗ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ನಿಂತಿದ್ದಾರೆ.
ಬೆಳಗಾವಿ ಕ್ಷೇತ್ರದಲ್ಲಿ ಅವರಿಗೆ ಸಾಕಷ್ಟು ಬೆಂಬಲವಿದೆ. ಇದೇ 17ರಂದು ಅಲ್ಲಿ ಚುನಾವಣೆ ನಡೆಯುತ್ತಿದೆ, ಈ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆಗೆ ಮಾತನಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ವಿರುದ್ಧ ಗೆದ್ದು 7 ಲಕ್ಷಕ್ಕೂ ಅಧಿಕ ಮತಗಳು ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಅವರೊಂದಿಗಿನ ಸಂದರ್ಶನದ ಆಯ್ದ ಭಾಗ ಇಲ್ಲಿದೆ:
ರಾಜ್ಯ ರಾಜಕೀಯದಲ್ಲಿ ದೊಡ್ಡ ಕನಸುಗಳನ್ನು ಕಂಡವರು ನೀವು. ಹೀಗಿರುವಾಗ ಲೋಕಸಭೆ ಚುನಾವಣೆಗೆ ಪಕ್ಷದ ನಾಯಕರ ಒತ್ತಡದಿಂದ ಸ್ಪರ್ಧಿಸುತ್ತಿದ್ದೀರಾ?
-ಖಂಡಿತ ಇಲ್ಲ, ಆದರೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಪಕ್ಷದಲ್ಲಿ ಎಲ್ಲರೂ ಬದ್ಧರಾಗಬೇಕು. ಇಂತಹ ದೊಡ್ಡ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ವಿಶ್ವಾಸವಿರುವುದರಿಂದ ಕಾಂಗ್ರೆಸ್ ನಲ್ಲಿ ಹೈಕಮಾಂಡ್ ನನ್ನನ್ನು ಚುನಾವಣಾ ಕಣಕ್ಕಿಳಿಸಿದೆ. ನನಗೆ ಈ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆಯಿದ್ದಿಲ್ಲದಿದ್ದರೆ ಕಳೆದ ಎರಡು ತಿಂಗಳ ಹಿಂದೆಯೇ ತಯಾರಿ, ಸಿದ್ಧತೆ ಮಾಡಿಕೊಳ್ಳುತ್ತಿರಲಿಲ್ಲ.
ಅನುಕಂಪದ ಮತಗಳು ಸಿಗಲು ಮಂಗಳಾ ಅಂಗಡಿಯವರನ್ನು ಕಣಕ್ಕಿಳಿಸಿರುವ ಬಗ್ಗೆ ಏನು ಹೇಳುತ್ತೀರಿ?
-ಅಭಿವೃದ್ದಿ ಆಧಾರದ ಮೇಲೆ ಲೋಕಸಭೆ ಚುನಾವಣಾ ಫಲಿತಾಂಶ ನಿರ್ಧಾರವಾಗುತ್ತದೆ. ಇಲ್ಲಿ ಬೇರೆ ವಿಷಯಗಳು ಮುಖ್ಯವಾಗುವುದಿಲ್ಲ. 25 ವರ್ಷಕ್ಕೂ ಹೆಚ್ಚು ಕಾಲದಿಂದ ನಾನು ರಾಜಕೀಯದಲ್ಲಿದ್ದೇನೆ, ರಾಜ್ಯದ ಹಲವು ಭಾಗಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿಸಿ ಅದರ ಕಷ್ಟವೇನು ಎಂದು ನನಗೆ ಗೊತ್ತಿದೆ, ಜನತೆಗೆ ನೀಡಿದ ಸೇವೆಗೆ ಏನು ಕೊಡುತ್ತಾರೆ ಎಂದು ನನಗೆ ಗೊತ್ತಾಗಬೇಕಿದೆ.
ನಿಮ್ಮ ಪ್ರಚಾರಕ್ಕೆ ಹೇಗೆ ಪ್ರತಿಕ್ರಿಯೆ ಸಿಕ್ಕಿದೆ?
-ಬಹಳಷ್ಟು ಜನರು ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಬಹುತೇಕ ರ್ಯಾಲಿಗಳಲ್ಲಿ ನನ್ನ ಪರವಾಗಿ ಅದ್ಭುತ ಬೆಂಬಲ ಸಿಕ್ಕಿದೆ.
ಲಿಂಗಾಯತ ಸಮುದಾಯ ಹೇಗೆ ಮತ ಹಾಕಬಹುದು?
-ಕಳೆದೆರಡು ದಶಕಗಳಿಂದ ಈ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬಕ್ಕೆ ಜನರ ಬೆಂಬಲ, ಆಶೀರ್ವಾದ ಸಾಕಷ್ಟು ಸಿಕ್ಕಿದೆ. ಅದಕ್ಕೆ ನಮ್ಮ ಗೆಲುವೇ ಸಾಕ್ಷಿ. ಈ ಬಾರಿ ಅದು ಲಿಂಗಾಯತರಿರಬಹುದು, ಅಥವಾ ಬೇರೆ ಸಮುದಾಯಗಳಿರಬಹುದು ನನ್ನ ಸಾಧನೆ, ಕೆಲಸಗಳನ್ನು ನೋಡಿ ಮತ ಹಾಕುತ್ತಾರೆ. ಇಲ್ಲಿ ಜಾತಿ ವಿಷಯ ಕೆಲಸ ಮಾಡುವುದಿಲ್ಲ.
ನಿಮ್ಮ ಸೋದರರಾದ ಬಾಲಚಂದ್ರ ಮತ್ತು ರಮೇಶ್ ಜಾರಕಿಹೊಳಿ ಚುನಾವಣಾ ಪ್ರಚಾರದಿಂದ ದೂರವುಳಿದಿದ್ದಾರೆ. ಇದು ನಿಮಗೆ ಸಹಾಯ ಮಾಡಬಹುದೇ?
-ಖಂಡಿತ, ನನಗೆ ಸಹಾಯವಾಗುತ್ತದೆ ಎಂದು ಭಾವಿಸಿದ್ದೇನೆ. ಅರಭಾವಿ ಮತ್ತು ಗೋಕಾಕ್ ಕ್ಷೇತ್ರದ ಜನತೆ ಜಾರಕಿಹೊಳಿಗೆ ಮತ ಹಾಕುತ್ತಾರೆಯೇ ಹೊರತು ಪಕ್ಷಕ್ಕಲ್ಲ.
ನಿಮ್ಮ ಅಂದಾಜು ಏನಿದೆ?
ನನಗೆ 7 ಲಕ್ಷಕ್ಕೂ ಹೆಚ್ಚಿನ ಮತಗಳು ಸಿಕ್ಕಿ ಗೆಲ್ಲುತ್ತೇನೆ. ಈ ಬಾರಿ ಉಪ ಚುನಾವಣೆಯಲ್ಲಿ ಸುಮಾರು 12 ಲಕ್ಷ ಮತದಾನವಾಗಬಹುದು ಎಂಬ ಅಂದಾಜು ನನ್ನದು.