ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೊಮ್ಮೆ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಕೊರೋನಾ ಬಂದಿರುವ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಬೊಕ್ಕಸ ಬರಿದಾಗಿದೆ, ಜನರಿಗೆ ಕಷ್ಟ ಇದೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿಗಳೇ ಹೇಳುತ್ತಿರುವ ಸಂದರ್ಭದಲ್ಲಿ ವೈಯಕ್ತಿಕ ಮೋಜಿಗೋಸ್ಕರ ಸರ್ಕಾರದ 28 ಲಕ್ಷ ರೂಪಾಯಿಯಲ್ಲಿ ಸ್ವಿಮ್ಮಿಂಗ್ ಪೂಲ್ ನ್ನು ಕಟ್ಟಿಸಿಕೊಳ್ಳುವ ಅಗತ್ಯವೇನಿತ್ತು ಎಂದು ಪ್ರತಾಪ್ ಸಿಂಹ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರನ್ನು ಪ್ರಶ್ನಿಸಿದ್ದಾರೆ.
ವೈಯಕ್ತಿಕ ಮೋಜಿಗೋಸ್ಕರ ಸರ್ಕಾರದ ಹಣವನ್ನು ದುರ್ಬಳಕೆ ಮಾಡುತ್ತಿರುವ ಅಧಿಕಾರಿಗಳಿಂದ ಜನಪ್ರತಿನಿಧಿಗಳು ಪಾಠ ಕಲಿಯುವ ಅಗತ್ಯವಿಲ್ಲ. ಕೊರೋನಾ ನಿರ್ವಹಣೆಗೆಂದು ಜಿಲ್ಲಾ ಉಸ್ತುವಾರಿ ಸಚಿವರು 41 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಅದರಲ್ಲಿ ಇನ್ನು ಎರಡೇ ಕೋಟಿ ಉಳಿದಿರುವುದು ಎಂದು ಜಿಲ್ಲಾಧಿಕಾರಿಗಳು ಹೇಳುತ್ತಿದ್ದಾರೆ, ಹಾಗಾದರೆ 39 ಕೋಟಿ ರೂಪಾಯಿ ಎಲ್ಲಿಗೆ ಖರ್ಚಾಯಿತು, ಯಾವ ಗುತ್ತಿಗೆಗೆ, ಕೆಲಸಕ್ಕೆ ನೀಡಿದ್ದಾರೆ, ಏನು ಸಾಮಗ್ರಿಗಳನ್ನು ತಂದಿದ್ದಾರೆ, 39 ಕೋಟಿ ರೂಪಾಯಿಗೆ ಲೆಕ್ಕ ಕೊಡಲಿ ಎಂದು ಸವಾಲು ಹಾಕಿದರು.
ನಿನ್ನೆ 25 ಲಕ್ಷ ರೂಪಾಯಿ ವೈದ್ಯಕೀಯ ಸೌಲಭ್ಯ ಖರೀದಿಗೆ ದುಡ್ಡಿಲ್ಲ ಎಂದರು, ಸ್ವಿಮ್ಮಿಂಗ್ ಪೂಲ್ ಕಟ್ಟಿಸಲು ಹಾಗಾದರೆ ದುಡ್ಡಿದೆಯೇ, ವೈದ್ಯಕೀಯ ಸೌಲಭ್ಯ ನೀಡಲು ಆ ಕಾಯ್ದೆ, ಈ ಕಾಯ್ದೆ ಅಡ್ಡಿ ಇದೆ ಎನ್ನುತ್ತಾರೆ, ಸ್ಮಿಮ್ಮಿಂಗ್ ಪೂಲ್ ಕಟ್ಟಲು ಕಾಯ್ದೆ, ಕಾನೂನು, ಟೆಂಡರ್ ಮಾಡಿದ್ದಾರೆಯೇ, ನೀವು ಮಾಧ್ಯಮ ಪ್ರತಿನಿಧಿಗಳು ಅವರನ್ನು ಹೋಗಿ ಕೇಳಬೇಕು ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ಕೋವಿಡ್ ನಿರ್ವಹಣೆಗೆ ಮೈಸೂರು ಜಿಲ್ಲೆಗೆ 41 ಕೋಟಿ ಹಣ ಕೊಟ್ಟಿದೆ. ಇದುವರೆಗೂ 39 ಕೋಟಿ ಖರ್ಚಾಗಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರಿಗೆ ಮೊದಲು ಇದರ ಲೆಕ್ಕ ಕೊಡಿ. ಕೋವಿಡ್ ಔಷಧಿ ಖರೀದಿಸಲು ಟೆಂಡರ್ ಅದು ಇದು ಅಂತೀರಾ? ಸ್ವಿಮ್ಮಿಂಗ್ ಪೂಲ್ ಕಟ್ಟಿಸಲು ಟೆಂಡರ್ ಕಾಯ್ದೆ ನೋಡಿದ್ರಾ ? ಪಾರಂಪರಿಕ ನಿಯಮ ಪಾಲಿಸಿದ್ದೀರಾ ? ಮೈಸೂರು ಮಹಾನಗರ ಪಾಲಿಕೆಯಿಂದ ಪರ್ಮಿಷನ್ ಪಡೆದಿದ್ದೀರಾ ? ಇದಾವುದಕ್ಕೂ ನಿಯಮ ಪಾಲಿಸಿಲ್ಲವೆಂದ ಮೇಲೆ, ಔಷಧಿ ಖರೀದಿಗೆ ಟೆಂಡರ್ ಕಾಯ್ದೆ ಬೇಕಾ ಎಂದು ಕೇಳಿದರು.
ಅಲ್ಲದೆ 16 ಸ್ಟೆಪ್ ಡೌನ್ ಆಸ್ಪತ್ರೆ ತೆರೆಯಲು ಕಮಿಟಿ ವರಿದಿ ನೀಡಿದೆಯಾ, ಬಡವರಿಗೆ ಔಷಧಿ ಕೊಡಿಸಲು ನಿಮ್ಮ ಬಳಿ ದುಡ್ಡಿಲ್ಲವೇ ಎಂದು ಪ್ರತಾಪ್ ಸಿಂಹ ಕೇಳಿದರು.ಅಂದಹಾಗೆ, ಇಂದು ರೋಹಿಣಿ ಸಿಂಧೂರಿಯವರ ಹುಟ್ಟುಹಬ್ಬವಾಗಿದ್ದು ಅದಕ್ಕೆ ಪ್ರತಾಪ್ ಸಿಂಹ ಭರ್ಜರಿ ವಾಗ್ದಾಳಿಯ ಉಡುಗೊರೆ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
Follow us on Social media