ನವದೆಹಲಿ: ಲಡಾಖ್ ಸಂಘರ್ಷದ ಬಳಿಕ ಒಂದರ ಮೇಲೊಂದರಂತೆ ಚೀನಾಗೆ ಶಾಕ್ ನೀಡುತ್ತಿರುವ ಕೇಂದ್ರ ಸರ್ಕಾರ ಇದೀಗ ಚೀನಾದ ಆರ್ಥಿಕ ಬುಡಕ್ಕೇ ಏಟು ನೀಡುವ ಆಟಿಕೆ ತಯಾರಿಕಾ ವಲಯದ ಮೇಲೆ ಕಣ್ಣಿರಿಸಿದೆ.
ಹೌದು.. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ಕರೆದಿದ್ದು, ಸಭೆಯಲ್ಲಿ ಭಾರತೀಯ ಆಟಿಕೆ ತಯಾರಿಕಾ ವಲಯದ ಉತ್ತೇಜನದ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಸ್ವತಃ ಪ್ರಧಾನಿ ಮಂತ್ರಿಗಳ ಕಚೇರಿ ಮಾಹಿತಿ ನೀಡಿದ್ದು, ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದ ಸಾಂಪ್ರದಾಯಿಕ ಆಟಿಕೆಗಳನ್ನು ಆಧುನಿಕವಾಗಿ ತಯಾರಿಸುವ ಕುರಿತು ಪ್ರಧಾನಿ ಮೋದಿ ಚರ್ಚೆ ನಡೆಸಿದರು ಎಂದು ಹೇಳಿದೆ.
ಇದೇ ವಿಚಾರವಾಗಿ ಪ್ರಧಾನಿ ಮೋದಿ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರತೀಯ ಗೊಂಬೆಗಳು ಮತ್ತು ಆಟಿಕೆಗಳ ಉತ್ಪಾದನೆಗೆ ಉತ್ತೇಜನ ನೀಡಿ ಜಾಗತಿಕವಾಗಿ ಖ್ಯಾತಿ ಹೆಚ್ಚಿಸುವ ಮಾರ್ಗಗಳನ್ನು ಚರ್ಚಿಸಲು ಹಿರಿಯ ಮಂತ್ರಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು ಹೇಳಿದ್ದಾರೆ.
‘ಭಾರತವು ಹಲವಾರು ಆಟಿಕೆ ಸಮೂಹಗಳಿಗೆ ಮೂಲ ನೆಲೆಯಾಗಿದ್ದು, ಸ್ಥಳೀಯ ಆಟಿಕೆಗಳನ್ನು ಉತ್ಪಾದಿಸುವ ಸಾವಿರಾರು ಕುಶಲಕರ್ಮಿಗಳು ಸಾಂಸ್ಕೃತಿಕ ಸಂಪರ್ಕವನ್ನು ಹೊಂದಿರುವುದಲ್ಲದೆ, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಜೀವನ ಕೌಶಲ್ಯ ಮತ್ತು ಮನೋಶಕ್ತಿ ಕೌಶಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತಿದ್ದಾರೆ. ಇಂತಹ ಸಮೂಹಗಳನ್ನು ನವೀನ ಮತ್ತು ಸೃಜನಶೀಲ ವಿಧಾನಗಳ ಮೂಲಕ ಉತ್ತೇಜಿಸಬೇಕು. ಭಾರತೀಯ ಆಟಿಕೆ ಮಾರುಕಟ್ಟೆಯು ಪರಿವರ್ತಕ ಬದಲಾವಣೆ ತರುವ ಸಾಮರ್ಥ್ಯವನ್ನು ಹೊಂದಿದೆ. ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ‘ಲೋಕಲ್ ಟು ವೋಕಲ್’ ಪ್ರಚಾರ ಮಾಡುವ ಮೂಲಕ ಉದ್ಯಮದಲ್ಲಿ ಪರಿವರ್ತಕ ಬದಲಾವಣೆಯನ್ನು ತರಬಹುದು. ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಬಳಕೆ ಮತ್ತು ಜಾಗತಿಕ ಗುಣಮಟ್ಟವನ್ನು ಪೂರೈಸುವ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವತ್ತ ಗಮನ ಹರಿಸಬೇಕು. ಆಟಿಕೆಗಳು ‘ಏಕ ಭಾರತ, ಶ್ರೇಷ್ಠ ಭಾರತ’ ಉತ್ಸಾಹವನ್ನು ಹೆಚ್ಚಿಸಲು ಅತ್ಯುತ್ತಮ ಮಾಧ್ಯಮವಾಗಬಹುದು. ಹೀಗಾಗಿ ಆಟಿಕೆಗಳು ಭಾರತೀಯ ಮೌಲ್ಯ ವ್ಯವಸ್ಥೆ ಮತ್ತು ಸಾಂಸ್ಕೃತಿಕವಾಗಿ ಸ್ಥಾಪಿತವಾದ ಪರಿಸರ ಸ್ನೇಹಿ ವಿಧಾನವನ್ನು ಪ್ರತಿಬಿಂಬಿಸಬೇಕು. ಭಾರತದ ಸಂಸ್ಕೃತಿಯನ್ನು ವಿಶೇಷವಾಗಿ ಕರಕುಶಲ ಆಟಿಕೆಗಳಿಗೆ ಹೆಸರುವಾಸಿಯಾದ ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ಒಂದು ಸಾಧನವಾಗಿ ಬಳಸಬೇಕು ಎಂದು ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು.
ಅಲ್ಲದೆ ಮಕ್ಕಳ ಅರಿವಿನ ಕೌಶಲ್ಯಗಳ ಮೇಲೆ ಆಟಿಕೆಗಳ ಪರಿಣಾಮ ಮತ್ತು ಅದು ಸಾಮಾಜಿಕ ಬದಲಾವಣೆಯ ಸಾಧನವಾಗಿ ಹೇಗೆ ಪರಿಣಮಿಸುತ್ತದೆ. ಆ ಮೂಲಕ ರಾಷ್ಟ್ರದ ಭವಿಷ್ಯದ ಪೀಳಿಗೆಯನ್ನು ರೂಪಿಸಲು ಸಹಾಯ ಮಾಡುತ್ತದೆ. ಭಾರತೀಯ ಸಂಸ್ಕೃತಿ ಮತ್ತು ನೀತಿಯೊಂದಿಗೆ ಹೊಂದಿಕೆಯಾದ ಆಟಿಕೆಗಳನ್ನು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲಾ ಅಂಗನವಾಡಿ ಕೇಂದ್ರಗಳು ಮತ್ತು ಶಾಲೆಗಳಲ್ಲಿ ಶಿಕ್ಷಣ ಸಾಧನಗಳಾಗಿ ಬಳಸಬೇಕು. ರಾಷ್ಟ್ರೀಯ ಗುರಿಗಳು ಮತ್ತು ಸಾಧನೆಗಳ ಬಗ್ಗೆ ಹೆಮ್ಮೆಯ ಭಾವವನ್ನು ಮೂಡಿಸುವಂತಹ ನವೀನ ವಿನ್ಯಾಸಗಳು ಮತ್ತು ಆಟಿಕೆಗಳೊಂದಿಗೆ ಯುವಕರು ತೊಡಗಿಸಿಕೊಳ್ಳಬೇಕು ಎಂದೂ ಮೋದಿ ಸಲಹೆ ನೀಡಿದರು ಎಂದು ಹೇಳಲಾಗಿದೆ.
ಇನ್ನು ಕಳೆದ ಮಾರ್ಚ್ ನಲ್ಲಿ ಹೇರಲಾಗಿದ್ದ ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಭಾರತದ ಆಟಿಕೆ ತಯಾರಿಕಾ ಮತ್ತು ವ್ಯಾಪಾರ ವಲಯಕ್ಕೆ ಬರೊಬ್ಬರಿ 10 ಸಾವಿರ ಕೋಟಿ ರೂ ನಷ್ಟವಾಗಿತ್ತು. ಈ ಪೈಕಿ ಚೀನಾ ಮೂಲದ ಆಟಿಕೆ ತಯಾರಕರದ್ದೇ ಸಿಂಹ ಪಾಲಿತ್ತು ಎಂದು ಹೇಳಲಾಗಿತ್ತು. ಭಾರತದಲ್ಲಿ ವ್ಯಾಪಾರವಾಗುವ ಒಟ್ಟಾರೆ ಆಟಿಕೆಗಳ ಪೈಕಿ ಚೀನಾ ಮೂಲದ ಆಟಿಕೆಗಳ ಪ್ರಮಾಣವೇ ಶೇ.90ರಷ್ಟಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Follow us on Social media