ಬೆಂಗಳೂರು: ರಾಜ್ಯದ ಯಾವುದೇ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಕೊರೋನಾ ಪಾಸಿಟಿವ್ ಇರುವ ರೋಗಿಗಳನ್ನು ಹಾಸಿಗೆ ಖಾಲಿಯಿದ್ದರೂ ದಾಖಲಿಸಿಕೊಳ್ಳದೆ ಇದ್ದರೆ ಅಥವಾ ವಾಪಸ್ ಕಳುಹಿಸಿದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಸೋಮವಾರ ಹೇಳಿದ್ದಾರೆ.
ಜೂ.30ರಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಗರದ 9 ಖಾಸಗಿ ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.
ಮೇಯರ್ ಎಂ.ಗೌತಮ್ ಕುಮಾರ್, ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಹಾಗೂ 70 ವಾರ್ಡ್ ಗಳ ಕಾರ್ಪೊರೇಟರ್ ಗಳೊಂದಿಗೆ ಸೋಮವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ಅವರು, ನಾನು ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷನಾಗಿದ್ದೇನೆ ಮತ್ತು ಯಾರಾದರೂ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಸಾಕಷ್ಟು ಎಚ್ಚರಿಕೆಗಳನ್ನು ನೀಡಲಾಗಿದೆ. ಇದೀಗ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕೊರೋನಾ ಸೋಂಕಿತ ವ್ಯಕ್ತಿ ನೇರವಾಗಿ ಆಸ್ಪತ್ರೆಗೆ ಹೋಗಿ ದಾಖಲು ಮಾಡಿಕೊಳ್ಳುವಂತೆ ತಿಳಿಸಿದರೆ, ದಾಖಲು ಮಾಡಿಕೊಳ್ಳಲಾಗುವುದಿಲ್ಲ. ಕೊರೋನಾ ಬಗ್ಗೆ ಸೋಂಕಿತ ವ್ಯಕ್ತಿಗಳಿಗೆ ಸರ್ಕಾರವೇ ಮಾಹಿತಿ ನೀಡುತ್ತದೆ. ಜನರು ಸಹಕಾರ ನೀಡಬೇಕು. ಮನೆಯಲ್ಲಿಯೇ ಇರಬೇಕು. ವರದಿ ಬಂದ ಕೂಡಲೇ ಸರ್ಕಾರವೇ ಆ್ಯಂಬುಲೆನ್ಸ್ ರವಾನಿಸಿದ ಸೂಕ್ತ ಆಸ್ಪತ್ರೆಗೆ ದಾಖಲಿಸುತ್ತದೆ. ಈ ವೇಳೆ ವಾರ್ಡ್ ಗಳ ಕಾರ್ಪೊರೇಟರ್, ಆರೋಗ್ಯ ಕಾರ್ಯಕರ್ತರು ಹಾಗೂ ಜಂಟಿ ಆಯುಕ್ತರು ಈ ವೇಳೆ ಸ್ಥಳದಲ್ಲಿರಲಿದ್ದಾರೆ ಮತ್ತು ಜಾಗೃತಿ ಮೂಡಿಸಲಿದ್ದಾರೆಂದು ತಿಳಿಸಿದ್ದಾರೆ.
ಅಲ್ಲದೆ, ಕಾರ್ಪೊರೇಟರ್ ಗಳಿಗೆ ಕೆಲ ಸೂಚನೆಗಳನ್ನು ನೀಡಿರುವ ಅವರು, ಕಾರ್ಪೊರೇಟರ್ ಗಳು ತಮ್ಮ ತಮ್ಮ ವಾರ್ಡ್ ಗಳ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಬೇಕು. ಬಿತ್ತಿಪತ್ರಗಳನ್ನು ಮುದ್ರಿಸಿ ಜನರಿಗೆ ವಿತರಿಸಬೇಕು. ಈ ಭಿತ್ತಿಪತ್ರದಲ್ಲಿ ತಮ್ಮ ಹಾಗೂ ಜಂಟಿ ಆಯುಕ್ತರು, ಆರೋಗ್ಯಾಧಿಕಾರಿಗಳು, ಆರೋಗ್ಯ ಕಾರ್ಯಕರ್ತರು, ಆ್ಯಂಬುಲೆನ್ಸ್ ಚಾಲಕರ ಮೊಬೈಲ್ ಸಂಖ್ಯೆಗಳನ್ನು ನಮೂದಿಸಬೇಕು ಎಂದಿದ್ದಾರೆ.
ನಗರದ ಪ್ರತೀವಾರ್ಡ್ ನಲ್ಲಿಯೂ ಕಂಟೈನ್ಮೆಂಟ್ ಝೋನ್ ಗಳಿವೆ. ಪ್ರತೀ ವಾರ್ಡ್ಗೂ ರೂ.20 ಲಕ್ಷ ಹಾಗೂ ಹೆಚ್ಚುವರಿಯಾಗಿ ರೂ.10 ಲಕ್ಷ ನೀಡಲಾಗುತ್ತಿದೆ. ಸೀಲ್’ಡೌನ್ ಗೊಂಡ ಪ್ರದೇಶಗಳಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ತಮ್ಮ ತಮ್ಮ ವಾರ್ಡ್ ಗಳಲ್ಲಿ ಆ್ಯಂಬುಲೆನ್ಸ್, ಮೊಬೈಲ್ ಡಯಾಲಿಸಿಸ್ ವಾಹನ, ಔಷಧಿಗಳು ಹಾಗೂ ಆಹಾರ ಸೌಲಭ್ಯಗಳಿರುವಂತೆ ಕಾರ್ಪೊರೇಟರ್ ಗಳು ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
Follow us on Social media