ಚಾಮರಾಜನಗರ: ವಿಷ ಮಿಶ್ರಿತ ಮೇವನ್ನು ಸೇವಿಸಿ 10 ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿದ್ದು , ೫೦ ಕ್ಕೂ ಹೆಚ್ಚು ಜಾನುವಾರುಗಳು ಅಸ್ವಸ್ಥಗೊಂಡಿರುವ ದಾರುಣ ಘಟನೆ ಹನೂರು ತಾಲ್ಲೂಕಿನ ಹುತ್ತೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ತಾಲೂಕಿನ ಹುತ್ತೂರು ಗ್ರಾಮದ ಸಿದ್ದರಾಜು ಎಂಬುವವರಿಗೆ ಸೇರಿದ್ದ 4, ಶಿವಮೂರ್ತಿ ಎಂಬುವವರಿಗೆ ಸೇರಿದ್ದ 3, ರಂಗಸ್ವಾಮಿ ಎಂಬುವವರಿಗೆ ಸೇರಿದ್ದ 1, ಕೃಷ್ಣಪ್ಪ ಎಂಬುವವರಿಗೆ ಸೇರಿದ್ದ 1 ಮತ್ತು ಶಿವಮಲ್ಲು ಎಂಬುವವರಿಗೆ ಸೇರಿದ್ದ 1 ಜಾನುವಾರು ಮೃತಪಟ್ಟಿವೆ.
ಏನಿದು ಘಟನೆ: ತಾಲೂಕಿನ ಹುತ್ತೂರು ಗ್ರಾಮದಲ್ಲಿ ಮೇಯಲು ಹೊರಟಿದ್ದ ಕೆಲ ಜಾನುವಾರುಗಳು ರಸ್ತೆ ಬದಿಯ ಅಲ್ಲಲ್ಲಿ ಮೃತಪಟ್ಟಿವೆ. ಇನ್ನು ಕೆಲ ಜಾನುವಾರುಗಳು ಹೊಟ್ಟೆ ಉಬ್ಬಿಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸ್ಥಿತಿಯಲ್ಲಿ ಕಂಡುಬಂದಿವೆ. ಇದನ್ನು ಗಮನಿಸಿದ ಕೂಡಲೇ ಗ್ರಾಮಸ್ಥರು ಆತಂಕಕ್ಕೀಡಾಗಿ ಪಶು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪಿ.ಜಿ.ಪಾಳ್ಯ ಪಶು ಇಲಾಖೆ ಜಾನುವಾರು ಅಧಿಕಾರಿ ರಾಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಜಾನುವಾರುಗಳಿಗೆ ಅಗತ್ಯ ಔಷಧೋಪಚಾರ ನೀಡಿದ್ದಾರೆ.
ಜಾನುವಾರುಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಗ್ರಾಮದ ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದ್ದು ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಜಾನುವಾರುಗಳು ಕುಡಿಯುವ ಹಳ್ಳದ ನೀರಿಗೆ ಕಿಡಿಗೇಡಿಗಳು ವಿಷಮಿಶ್ರಣ ಮಾಡಿದ್ದಾರೆ ಎನ್ನುತ್ತಿದ್ದು ಇನ್ನು ಕೆಲವರು ಜಮೀನಿನಲ್ಲಿ ಬೆಳೆಗಳಿಗೆ ಸಿಂಪಡಿಸಿದ್ದ ಕ್ರಿಮಿನಾಶಕಯುಕ್ತ ಮೇವು ಸೇವಿಸಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸಾವಿಗೀಡಾಗಿರುವ ಜಾನುವಾರುಗಳ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು ವರದಿ ಬಂದ ನಂತರವಷ್ಟೆ ಸಾವಿನ ನಿಖರ ಕಾರಣ ತಿಳಿದುಬರಲಿದೆ.
Follow us on Social media