ಬೆಂಗಳೂರು: ಗೋಸಂರಕ್ಷಣೆ ಬಗ್ಗೆ ಪ್ರಚಾರ ನಡೆಸುವ ಬಿಜೆಪಿ, ಹಸುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಲುಬಾಯಿ ಜ್ವರದ ಚಿಕಿತ್ಸೆಗೆ ಸ್ಪಂದಿಸದೆ ಇರುವುದನ್ನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಜಾನುವಾರುಗಳಲ್ಲಿ ಕಾಲುಬಾಯಿ ಜ್ವರವು ಸಾಂಕ್ರಾಮಿಕವಾಗಿ ಹರಡುತ್ತಿದೆ. ಇದು ಬಹಳ ಗಂಭೀರ ಕಾಯಿಲೆಯಾಗಿದ್ದು, ಕೇಂದ್ರ ಸರ್ಕಾರದ ವತಿಯಿಂದ ಲಸಿಕೆ ಅಭಿಯಾನ ನಡೆಯಬೇಕಿತ್ತು. ಆದರೆ ಅದನ್ನು ನಡೆಸದೆ ಗೋವುಗಳ ಸಾವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಾರಣವಾಗುತ್ತಿವೆ. ಇದು ಯಾವ ರೀತಿಯ ಗೋರಕ್ಷಣೆ ಎಂದು ಪ್ರಶ್ನಿಸಿದ್ದಾರೆ.
‘ಗೋ’ ರಕ್ಷಣೆ ಬಗ್ಗೆ ಬಿಜೆಪಿ ಹಾದಿಬೀದಿಯಲ್ಲಿ ಅರಚುತ್ತದೇ ಹೊರತು, ಗೋವುಗಳ ರಕ್ಷಣೆ ಮಾಡುವುದಿಲ್ಲ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಹಸುಗಳಲ್ಲಿ ಕಾಣಿಸಿಕೊಳ್ಳುವ ಗಂಭೀರ ಕಾಯಿಲೆಯಾದ ಕಾಲುಬಾಯಿ ಜ್ವರದ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸಿಯೇ ಇಲ್ಲ. ರಾಜ್ಯ ಸರ್ಕಾರ ಕೇಳಿಲ್ಲ. ಈಗ ರಾಸುಗಳು ನರಳುತ್ತಿವೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ರಾಸುಗಳಿಗೆ ಲಸಿಕೆ ಅಭಿಯಾನ ನಡೆಸಬೇಕಿತ್ತು. ಆದರೆ, ಕೋವಿಡ್ 19 ಕಾರಣದಿಂದ ಲಸಿಕೆ ಹಾಕಿಲ್ಲ ಎಂದು ಪಶುವೈದ್ಯರು ಹೇಳಿದ್ದಾರೆ. ಲಸಿಕೆ ಅಭಿಯಾನ ನಡೆಸದೇ ಈಗ ಗೋವುಗಳನ್ನು ಸಾವಿನ ಬಾಯಿಗೆ ದೂಡಿರುವುದು ಎಂಥ ಗೋರಕ್ಷಣೆ? ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದೆ ನಿಂತು ಮಾಡಿದ ಗೋವಧೆಯಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
Follow us on Social media