ಕೋಲ್ಕತಾ: ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್) ಸ್ಫೋಟಕ ಆಟಗಾರ ಕೆರಿಬಿಯನ್ ಆಲ್ ರೌಂಡರ್ ಆಂಡ್ರೆ ರಸ್ಸೆಲ್ ಅವರು ಕ್ರಿಕೆಟ್ ನಿಂದ ನಿವೃತ್ತಿ ಹೊಂದುವವರೆಗೆ ಕೆಕೆಆರ್ ಪರ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಐಪಿಎಲ್ 13ನೇ ಆವೃತ್ತಿ ಮಾರ್ಚ್ 29ರಿಂದ ಆರಂಭವಾಗಬೇಕಿತ್ತು. ಆದರೆ ಕೊರೋನಾ ವೈರಸ್ ಭೀತಿಯಿಂದಾಗಿ ಐಪಿಎಲ್ ಅನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ಈಗ ರಸ್ಸೆಲ್ ಜಮೈಕಾದಲ್ಲಿದ್ದು, ಕೆಕೆಆರ್ ಅವರ ಅಧಿಕೃತ ವೆಬ್ ಸೈಟ್ ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ನಾನು ಕ್ರಿಕೆಟ್ ನಿಂದ ನಿವೃತ್ತಿ ಹೊಂದುವವರೆಗೂ ಕೆಕೆಆರ್ ಪರ ಆಡಲು ಬಯಸುತ್ತೇನೆ ಎಂದು ರಸ್ಸೆಲ್ ಹೇಳಿದ್ದಾರೆ. ನಾನು ಕಳೆದ ಆರು ಆವೃತ್ತಿಗಳಲ್ಲಿ ಕೆಕೆಆರ್ ಪರ ಆಡಿದ್ದೇನೆ ಮತ್ತು ತಂಡದೊಂದಿಗೆ ಕಳೆದ ಪ್ರತಿ ಕ್ಷಣವನ್ನು ನಾನು ಆನಂದಿಸಿದ್ದೇನೆ. ನನಗೆ ಐಪಿಎಲ್ ಟ್ರೋಫಿ ಬೇಕು ಮತ್ತು ಈ ವರ್ಷ ಐಪಿಎಲ್ ನಡೆದರೆ ನಾವು ಚಾಂಪಿಯನ್ ಆಗುತ್ತೇವೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
“ಒಂದು ಸತ್ಯ ಸಂಗತಿಯನ್ನು ಒಪ್ಪಿಕೊಳ್ಳುತ್ತೇನೆ. ಐಪಿಎಲ್‌ನಲ್ಲಿ ಸಿಕ್ಕಷ್ಟು ರೋಮಾಂಚನ ನನಗೆ ಬೇರೆಲ್ಲೂ ಸಿಕ್ಕಿಲ್ಲ. ಅಂದಹಾಗೆ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್)ನಲ್ಲೂ ಅಂಥದ್ದೇ ಅನುಭವವಾಗುತ್ತದೆ. ಆದರೆ, ಐಪಿಎಲ್ ಮತ್ತು ಈಡನ್ ಗಾರ್ಡನ್ಸ್‌ಗೆ ಹೋಲಿಕೆ ಮಾಡಲು ಖಂಡಿತಾ ಸಾಧ್ಯವಿಲ್ಲ. ನನಗೆ ಸಿಗುವ ಸ್ವಾಗತ ಮತ್ತು ಪ್ರೀತಿ ಬೇರೆಲ್ಲೂ ಸಿಗುವುದಿಲ್ಲ. ಇದರಿಂದ ನನ್ನ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದು ಉತ್ತಮ ರೀತಿಯ ಒತ್ತಡ,” ಎಂದು ರಸೆಲ್ ತಮ್ಮ ಮನದಾಳ ತೆರೆದಿಟ್ಟಿದ್ದಾರೆ.
Source : UNI
Follow us on Social media