ಬೆಂಗಳೂರು: ಮೇ ತಿಂಗಳ ಮೊದಲ ವಾರದಲ್ಲಿ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದ್ದು, ಮೇ ಅಂತ್ಯದಲ್ಲಿ ಕಡಿಮೆಯಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.ಇದಕ್ಕೆ ಪೂರಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಕೋವಿಡ್ ನಿಯಂತ್ರಣ ಸಂಬಂಧ ಬೆಂಗಳೂರಿನಲ್ಲಿಂದು ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ ತಿಂಗಳ ಕೊನೆಯವರೆಗೂ ಎಚ್ಚರಿಕೆಯಿಂದಿರಬೇಕು, ಮೇ ಮೊದಲ ವಾರದಲ್ಲಿ ಕೊರೋನಾ ಗರಿಷ್ಠ ಮಟ್ಟಕ್ಕೆ ತಲುಪಬಹುದು. ಮೇ ಅಂತ್ಯಕ್ಕೆ ಸ್ವಲ್ಪ ಕಡಿಮೆಯಾಗಬಹುದು. ಹೆಚ್ಚು ಪ್ರಕರಣ ಕಂಡುಬಂದರೆ ಅದಕ್ಕೆ ತಕ್ಕಂತೆ ಆಸ್ಪತ್ರೆ ಹಾಸಿಗೆ ಬೇಡಿಕೆ ಹೆಚ್ಚಾಗುತ್ತದೆ. ಇದಕ್ಕಾಗಿ ಖಾಸಗಿ ಆಸ್ಪತ್ರೆಗಳ ಸಹಕಾರ ಪಡೆಯಬೇಕು ಎಂದರು.
ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಪ್ರಯಾಣಿಕರನ್ನು ಪರೀಕ್ಷಿಸುವ ಹಾಗೂ ಪರೀಕ್ಷಾ ವರದಿ ಪರಿಶೀಲಿಸುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ಇವೆಲ್ಲವನ್ನೂ ವರದಿ ರೂಪದಲ್ಲಿ ನೀಡಲು ಸೂಚಿಸಲಾಗಿದೆ. ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಿ, ಸಮರ್ಪಕವಾಗಿ ಚರ್ಚಿಸಲಾಗುವುದು, ಇದನ್ನು ಪರಿಗಣಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಖಾಸಗಿ ಆಸ್ಪತ್ರೆಗಳು ಕೂಡಾ ಸರ್ಕಾರದೊಂದಿಗೆ ಕೆಲಸ ಮಾಡಿವೆ. ಟೆಲಿ ಐಸಿಯು ವ್ಯವಸ್ಥೆ ಮೊದಲಿಗೆ ನಮ್ಮ ಸರ್ಕಾರ ಆರಂಭಿಸಿದ್ದು, ಖಾಸಗಿ ಆಸ್ಪತ್ರೆಗಳು ಉಚಿತವಾಗಿ ಈ ಸೇವೆ ನೀಡಿವೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸಬೇಕಿದೆ. ಆರ್ಥಿಕ ಚಟುವಟಿಕೆಗೆ ತೊಂದರೆಯಾಗುವ ಯಾವುದೇ ಸಲಹೆ ನೀಡುವುದಿಲ್ಲ. ಆದರೆ, ಗುಂಪುಗೂಡದಂತೆ ಕ್ರಮ ವಹಿಸಬೇಕೆಂದು ತಜ್ಞರು ಹೇಳಿದ್ದಾರೆ ಎಂದು ಡಾ.ಕೆ. ಸುಧಾಕರ್ ತಿಳಿಸಿದರು.
Follow us on Social media