ಬೆಂಗಳೂರು : ರಾಜ್ಯದಲ್ಲಿ ಗುರುವಾರ ಮಧ್ಯಾಹ್ನದ ವೇಳೆಗೆ ಮತ್ತೆ ಎಂಟು ಕೊರೋನಾ ಪ್ರಕರಣಗಳು ದೃಢವಾಗಿದ್ದು ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏಳುನೂರರ ಗಡಿ ದಾಟಿದೆ.
ಈ ನಡುವೆ ದಾವಣಗೆರೆಯ 55 ವರ್ಷದ ಮಹಿಳೆಯೋರ್ವರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇವರು ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ರಕ್ತದೊತ್ತಡದ ಕಾಯಿಲೆಯಿಂದ ಕೂಡ ಬಳಲುತ್ತಿದ್ದು, ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯ ಸರ್ಕಾರ ಹೊರಡಿಸಿದ ಬುಲೆಟಿನ್ ನಲ್ಲಿರುವಂತೆ ರಾಜ್ಯದ ಒಟ್ತಾರೆ ಸೋಂಕಿತರ ಸಂಖ್ಯೆ 701 ಇದ್ದು, ಇದರಲ್ಲಿ 30 ಮಂದಿ ಸಾವನ್ನಪ್ಪಿದ್ದರೆ, 363 ಮಂದಿ ಗುಣಮುಖರಾಗಿದ್ದಾರೆ.
ಇಂದಿನ ಪ್ರಕರಣಗಳ ಪೈಕಿ, ದಾವಣಗೆರೆಯಲ್ಲಿ ಇಂದು ಮೃತಪಟ್ಟ 55 ವರ್ಷದ ಮಹಿಳೆ, ಜ್ವರದ ಲಕ್ಷಣಗಳನ್ನು ಹೊಂದಿದ್ದ 53 ಹಾಗೂ 40 ವರ್ಷದ ಮಹಿಳೆಯರು, ಕಲಬುರಗಿಯಲ್ಲಿ ಸೋಂಕಿತರ ಸಂಪರ್ಕ ಹೊಂದಿದ್ದ 35 ಹಾಗೂ 36 ವರ್ಷದ ವ್ಯಕ್ತಿಗಳು, ಬೆಳಗಾವಿಯ ಹಿರೇಬಾಗೇವಾಡಿಯ 13 ವರ್ಷದ ಬಾಲಕಿ, ಬೆಂಗಳೂರು ನಗರದ 49 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
Follow us on Social media