ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಆತಂಕಕಾರಿಯಾಗಿ ಏರಿಕೆಯಾಗುತ್ತಲೇ ಇದೆ. ಶುಕ್ರವಾರ ಸಂಜೆಯಿಂದ ಶನಿವಾರ ಮಧ್ಯಾಹ್ನದವರೆಗೆ ಒಟ್ಟು 41 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ದಾವಣಗೆರೆಯಲ್ಲಿ 651ನೇ ರೋಗಿಯ ಸಂಪರ್ಕಕ್ಕೆ ಬಂದ 45, 24, 26 ಮತ್ತು 24 ವರ್ಷದ ಮೂವರು ವ್ಯಕ್ತಿಗಳು ಮತ್ತು 20 ವರ್ಷದ ಯುವತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರು ನಗರದಲ್ಲಿ 12 ಮಂದಿಗೆ ಸೋಂಕು ತಗುಲಿದೆ. ಬಿಬಿಎಂಪಿ ಕಂಟೈನ್ಮೆಂಟ್ ವಲಯದ ಸಂಪರ್ಕಕ್ಕೆ ಬಂದ ತುಮಕೂರಿನ 45 ವರ್ಷದ ವ್ಯಕ್ತಿ ಮತ್ತು ಬೆಂಗಳೂರಿನ 20 ವರ್ಷದ ಯುವತಿಯಲ್ಲಿ ಸೋಂಕು ಪತ್ತೆಯಾಗಿದೆ. 454 ರೋಗಿಯ ಸಂಪರ್ಕಕ್ಕೆ ಬಂದ ಮೂವರು ಸೋಂಕಿತರಾಗಿದ್ದಾರೆ. ದಾವಣಗೆರೆಯ 48 ವರ್ಷ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.
ಉಳಿದಂತೆ ಪಾದರಾಯನಪುರದ 419 ನೇ ರೋಗಿಯ ಸಂಪರ್ಕಕ್ಕೆ ಬಂದ ನಾಲ್ವರು ಸೋಂಕಿತರಾಗಿದ್ದಾರೆ. ವಿಜಯಪುರದ 11 ವರ್ಷದ ಬಾಲಕಿ, ಬೀದರ್ ನ ಮೂವರು, ದಕ್ಷಿಣ ಕನ್ನಡದ ಬಂಟ್ವಾಳದ 11 ಜನರಿಗೆ ಸೋಂಕು ತಗುಲಿದೆ. ಜೊತೆಗೆ, ಅಹಮದಾಬಾದ್ ಹಾಗೂ ಗುಜರಾತ್ ಗೆ ಪ್ರಯಾಣ ಬೆಳೆಸಿದ ಚಿತ್ರದುರ್ಗದ ಮೂವರು ತಬ್ಲಿಘಿಗಳಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಅಹಮದಾಬಾದ್ ಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳ ತುಮಕೂರಿನ ಮೂವರು ತಬ್ಲಿಘಿಗಳಿಗೆ ಸೋಂಕು ತಗುಲಿದೆ. ಉತ್ತರ ಕನ್ನಡ ಭಟ್ಕಳದಲ್ಲಿ 48 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 794ಕ್ಕೇರಿಕೆಯಾಗಿದೆ. ಇಲ್ಲಿಯವರೆಗೆ ಒಟ್ಟು 31 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. 386 ಜನರು ಗುಣಮುಖರಾಗಿದ್ದಾರೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
Follow us on Social media