ಬೆಂಗಳೂರು: ಸರ್ಕಾರದ ವೈಫಲ್ಯದ ಬಗ್ಗೆ ಚರ್ಚಿಸುವುದು ಈಗ ಅನವಶ್ಯಕ. ಜನತೆಯ ಜೀವನವನ್ನು ರಕ್ಷಣೆ ಮಾಡುವಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಾಗಲೀ, ಹಾಗೂ ಸಿದ್ದರಾಮಯ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ಸರ್ಕಾರ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಸರ್ಕಾರದ ವಿರುದ್ಧ ಮತ್ತೆ ಆರೋಪ ಕೇಳಿಬರದಂತೆ ಸರ್ಕಾರ ಕರ್ತವ್ಯ ನಿರ್ವಹಿಸಬೇಕು. ವಿಪಕ್ಷ ನಾಯಕರನ್ನು ಸಭೆಗೆ ಕರೆಯುವಂತೆ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಜನರ ರಕ್ಷಣೆ ಬಗ್ಗೆ ಚರ್ಚೆ ನಡೆಯಬೇಕೇ ಹೊರತು ಪರಸ್ಪರ ರಾಜಕೀಯ ಆರೋಪ ಪ್ರತ್ಯಾರೋಪಗಳ ಚರ್ಚೆಯ ಅವಶ್ಯಕತೆಯಿಲ್ಲ ಎಂದು ಕಿವಿಮಾತು ಹೇಳಿದ್ದಾರೆ.
ವೀಡಿಯೋ ಮೂಲಕ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಮೇಲೆ ಹಣದ ದುರುಪಯೋಗವಾಗುತ್ತಿದೆ ಎಂಬ ಆರೋಪ ಮತ್ತೆ ಕೇಳಿಬರದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು, ಕೋವಿಡ್ ಕಾರ್ಯಪಡೆಯಲ್ಲಿ ಹಾಗೂ ಪ್ರತಿನಿತ್ಯ ಸರ್ಕಾರ ಕೋವಿಡ್ ಗಾಗಿ ನಡೆಸುವ ಸಭೆಗಳಿಗೆ ಸಿದ್ದರಾಮಯ್ಯ ಸೇರಿದಂತೆ ವಿಪಕ್ಷಗಳ ನಾಯಕರನ್ನು ಆಹ್ವಾನಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ಕೊರೊನಾದಿಂದಾಗಿ ಜನರು ತತ್ತರಿಸಿಹೋಗಿದ್ದು, ಇಂತಹ ಸಂಕಷ್ಟ ಸಂದರ್ಭದಲ್ಲಿ ಸರ್ಕಾರ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಪರಸ್ಪರ ಆರೋಪದಲ್ಲಿ ತೊಡಗಿಕೊಂಡಿರುವುದು ಸರಿಯಲ್ಲ. ಕೋವಿಡ್ ಚಿಕಿತ್ಸೆಯಲ್ಲಿ ಸರ್ಕಾರ ಹಣವನ್ನು ಲೂಟಿ ಮಾಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸರ್ಕಾರಕ್ಕೆ ಎಲ್ಲರೂ ಸಹಕಾರ ಕೊಟ್ಟರೂ ಸಹ ಕೋವಿಡ್ ದೊಡ್ಡಮಟ್ಟದಲ್ಲಿ ರಾಜ್ಯದಲ್ಲಿ ಹರಡಿ ಜನರು ಆತಂಕದಲ್ಲಿದ್ದಾರೆ. ಸರ್ಕಾರ ಈಗಲಾದರೂ ಹುಡುಗಾಟಿಕೆಯ ತೀರ್ಮಾನ ನಿಲ್ಲಿಸಿ, ಲೋಪ ದೋಷಗಳನ್ನು ಸರಿಪಡಿಸಿಕೊಂಡು ನಡೆಯಬೇಕು. ಮಾತುಗಳಿಗೆ ಸಭೆಗಳಿಗೆ ಮಾತ್ರ ಸರ್ಕಾರ ಮೀಸಲಾಗಿದೆ. ಇದನ್ನು ಬಿಟ್ಟು ಮುಂದಾದರೂ ಜನತೆಯತ್ತ ಲಕ್ಷ್ಯವಹಿಸಲಿ ಎಂದರು.
ಬೆಂಗಳೂರನ್ನು ಎಂಟುವಲಯಗಳನ್ನಾಗಿ ಮಾಡಿ ಎಂಟು ಸಚಿವರಿಗೆ ಜವಾಬ್ದಾರಿ ವಹಿಸಿರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಯಾವಯಾವ ಸಚಿವರು ಯಾವಯಾವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಅವರ ಜವಾಬ್ದಾರಿಗಳೇನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.
ಖಾಸಗಿ ಆಸ್ಪತ್ರೆಗಳಿಗೆ ಸೌಲಭ್ಯ ಕಡಿತಗೊಳಿಸುವುದಾಗಿ ಬೆದರಿಕೆ ಹಾಕುವ ಮೂಲಕ ಅವರಿಂದ ಸರ್ಕಾರ ಕೋವಿಡ್ ಚಿಕಿತ್ಸೆಗಾಗಿ ಸಹಕಾರ ಪಡೆಯಲು ಸಾಧ್ಯವಾಗುವುದಿಲ್ಲ. ಖಾಸಗಿ ಆಸ್ಪತ್ರೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. 10 ಸಾವಿರ ಹಾಸಿಗೆಗಳನ್ನು ಬಾಡಿಗೆಯಾಧಾರದ ಮೇಲೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಎಲ್ಲರ ಸಹಕಾರ ಪಡೆದು ವೈದ್ಯರ ಸೇವೆ ಪೀಜಿ ವಿದ್ಯಾರ್ಥಿಗಳು, ಮೆಡಿಕಲ್ ಉತ್ತೀರ್ಣರಾದ ವಿದ್ಯಾರ್ಥಿಗಳು ಸಹ ಕೋವಿಡ್ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇವರ ಸೇವೆ ವ್ಯರ್ಥವಾಗದಂತೆ ಸರ್ಕಾರ ವಿಶೇಷ ಭತ್ಯೆ ಹೆಚ್ಚಿನ ಪರಿಹಾರಧನ ನೀಡಬೇಕು. ಮೆಡಿಕಲ್ ವಿದ್ಯಾರ್ಥಿಗಳ ಪೋಷಕರಿಗೂ ಸಹ ವಿಶ್ವಾಸಕ್ಕೆ ತೆಗೆದುಕೊಂಡು ಸೇವೆಯಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳಿಗೆ ರಕ್ಷಣೆ ಕೊಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಅಂತರ್ ಜಿಲ್ಲೆಯ ಪ್ರವೇಶಕ್ಕೆ ಸರಿಯಾದ ನಿಯಮ ರೂಪಿಸಬೇಕು. ಬೆಂಗಳೂರಿನಿಂದ ಬೇರೆಕಡೆ ಹೋಗುವ ಜನರಿಗೆ ರಕ್ಷಣೆ ನೀಡಬೇಕು. ಜನರ ಜೊತೆ ಚೆಲ್ಲಾಟವಾಡಬಾರದು.ಸರ್ಕಾರ ಸಭೆಗಳನ್ನು ನಡೆಸಿದ್ದು, ಸಭೆಗಳ ಫಲಿತಾಂಶ, ಸಭೆಗಳಿಂದಾದ ಪ್ರಯೋಜನದ ಬಗ್ಗೆ ಮುಖ್ಯಮಂತ್ರಿಗಳು ವರದಿ ನೀಡಬೇಕು. ಸರ್ಕಾರದಲ್ಲಿ ಸಚಿವರು ಕಚ್ಚಾಡುತ್ತಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಗದಿತ ಜವಾಬ್ದಾರಿ ನೀಡಬೇಕು. ಕೋವಿಡ್ ಜವಾಬ್ದಾರಿಗೆ ಸಚಿವರನ್ನು ಆಗಾಗ್ಗೆ ಬದಲಾಯಿಸುವ ಪರಿಯನ್ನು ಬಿಡಬೇಕು ಎಂದರು.
Follow us on Social media