ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಸಡಿಲಗೊಳಿಸಿದ ನಂತರ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ನಿನ್ನೆ ಮಂಡ್ಯಕ್ಕೆ ಕಂಟಕವಾಗಿದ್ದ ಮುಂಬೈ ನಂಜು ಇಂದು ಹಾಸನಕ್ಕೆ ತಟ್ಟಿದೆ.
ಮುಂಬೈನಿಂದ ಆಗಮಿಸಿದ್ದವರ ಪೈಕಿ ಹಾಸನದಲ್ಲಿ 21 ಮಂದಿಗೆ ಸೋಂಕು ತಗುಲಿದೆ. ಬೀದರ್ ನಲ್ಲಿ 10, ಮಂಡ್ಯದಲ್ಲಿ 8, ಕಲಬುರಗಿಯಲ್ಲಿ 7, ಉಡುಪಿಯಲ್ಲಿ 6, ಬೆಂಗಳೂರು ನಗರ 4, ತುಮಕೂರು 4, ರಾಯಚೂರು 4, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಯಾದಗಿರಿಯಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 1462ಕ್ಕೆ ಏರಿಕೆಯಾಗಿದೆ.
67 ಪ್ರಕರಣಗಳ ಪೈಕಿ 52 ಜನರು ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಇವರಲ್ಲಿ 51 ಜನರು ಮಹಾರಾಷ್ಟ್ರದಿಂದ ಆಗಮಿಸಿದ್ದಾರೆ. ಓರ್ವರು ವಿಶಾಖಪಟ್ಟಣದಿಂದ ಆಗಮಿಸಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ನಡುವೆ, ಬೆಂಗಳೂರು ನಗರದ 42 ವರ್ಷದ ವ್ಯಕ್ತಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಮೇ 18ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ರು ವೆಲ್ಲೂರಿಗೆ ಪ್ರಯಾಣ ಬೆಳೆಸಿದ ಹಿನ್ನೆಲೆ ಹೊಂದಿದ್ದರು ಎಂದರು.
1462 ಪ್ರಕರಣಗಳ ಪೈಕಿ 556 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು 864 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿಗೆ ರಾಜ್ಯದಲ್ಲಿ ಒಟ್ಟಾರೆ 41 ಮಂದಿ ಬಲಿಯಾಗಿದ್ದಾರೆ.
ಇಲ್ಲಿಯವರೆಗೆ ಬೆಂಗಳೂರಿನಲ್ಲಿ 28.53 ಲಕ್ಷ ಸೇರಿದಂತೆ ರಾಜ್ಯದಲ್ಲಿ ಒಟ್ಟು 63,53,248 ಜನರು ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂದರು.
ಬುಧವಾರ ರಾಜಧಾನಿ ಎಕ್ಸ್ ಪ್ರೆಸ್ ಬೆಂಗಳೂರಿಗೆ ಬಂದಿದ್ದು, 180 ಜನರು ಆಗಮಿಸಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ 22 ಜನರ ಸ್ವಾಬ್ ಪರೀಕ್ಷೆ ಮಾಡಲಾಗಿದೆ. ಇವರಲ್ಲಿ ಓರ್ವ ಗರ್ಭಿಣಿ, 6 ಮಕ್ಕಳು 60 ವರ್ಷ ಮೇಲ್ಪಟ್ಟ 15 ವ್ಯಕ್ತಿಗಳಿದ್ದಾರೆ. ವಿಮಾನದಮೂಲಕ 94 ಲಕ್ಷ ಜನರು ಆಗಮಿಸಿದ್ದಾರೆ. ಇವರಲ್ಲಿ ಯಾರಲ್ಲೂ ಸೋಂಕಿನ ಲಕ್ಷಣಗಳಿಲ್ಲ ಎಂದು ತಿಳಿಸಿದರು.
ಆರೋಗ್ಯ ಬುಲೆಟಿನ್ ನಲ್ಲಿ ಸೋಂಕಿತರ ಕುರಿತು ಮಾಹಿತಿ ನೀಡದಿರುವ ಕುರಿತು ವಿವರಣೆ ನೀಡಿದ ಅವರು, ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಡವಾಗಿ ದೊರೆಯುತ್ತಿದೆ.ಆದ್ದರಿಂದ ಅದನ್ನು ಪರಿಶೀಲಿಸಿ ಮಾಹಿತಿ ನೀಡಲು ತಡವಾಗುತ್ತಿದೆ. ಆದ್ದರಿಂದ ಇಂದು ಮಧ್ಯಾಹ್ನ ಸೋಂಕಿತರ ವಿವರ ನೀಡಲಾಗಿರಲಿಲ್ಲ. ಇನ್ನು ಮುಂದೆ ಹಿಂದಿನಂತೆ ಮಾಹಿತಿ ನೀಡಲಾಗುವುದು. ಇದರಲ್ಲಿ ಮುಚ್ಚಿಡುವ ಇಲ್ಲವೇ ಮುಜುಗರಪಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
Follow us on Social media