ಬೆಂಗಳೂರು: ರಾಜ್ಯದಲ್ಲಿ 8 ಜಿಲ್ಲೆಗಳು ಸೇರಿದಂತೆ ದೇಶಾದ್ಯಂತ 170 ಜಿಲ್ಲೆಗಳನ್ನು ಕೊರೋನಾ ಸೋಂಕಿನ ಹಾಟ್ ಸ್ಪಾಟ್ ಎಂದು ಗುರುತಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ನಗರ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಬಾಗಲಕೋಟೆ ಮತ್ತು ಧಾರವಾಡವನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ.
ಈ ಸಂಬಂಧ ಸರ್ಕಾರ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಈ ಪ್ರದೇಶಗಳಿಗೆ ಕಠಿಣ ಲಾಕ್ ಡೌನ್ ಅನ್ವಯವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಕೊರೋನಾ ಸೋಂಕು ಪ್ರಕರಣಗಳು ಆಧರಿಸಿ ಜಿಲ್ಲೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದ್ದು, ಹಾಟ್ ಸ್ಪಾಟ್, ನಾನ್ ಹಾಟ್ ಸ್ಪಾಟ್ ಮತ್ತು ಗ್ರೀನ್ ಎಂದು ವರ್ಗೀಕರಿಸಲಾಗಿದೆ.
ದೇಶಾದ್ಯಂತ ಒಟ್ಟು 170 ಜಿಲ್ಲೆಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರವಾಲ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಈಗ ಹಾಟ್‌ಸ್ಪಾಟ್‌ಗಳಲ್ಲದ ಪ್ರದೇಶಗಳು ಕೂಡ ಭವಿಷ್ಯದಲ್ಲಿ ಸಂಭಾವ್ಯ ಹಾಟ್‌ಸ್ಪಾಟ್‌ಗಳಾಗಿ ಪರಿಣಮಿಸಬಹುದು ಎಂದು ಅಗರವಾಲ್ ಹೇಳಿದ್ದಾರೆ.
ಬಳ್ಳಾರಿ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಉಡುಪಿ, ದಾವಣೆಗೆರೆ ಗದಗ, ತುಮಕೂರು, ಕೊಡಗು, ವಿಜಯಪುರ, ಚಿಕ್ಕಬಳ್ಳಾಪುರ ಹಾಗೂ ಉತ್ತರ ಕನ್ನಡವನ್ನು ನಾನ್ ಹಾಟ್ ಸ್ಪಾಟ್ ಜಿಲ್ಲೆಗಳು ಎಂದು ಹಾಗೂ ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲದ ಉಳಿದ 11 ಜಿಲ್ಲೆಗಳನ್ನು ಗ್ರೀನ್ ಜೋನ್ ಎಂದು ಘೋಷಿಸಲಾಗಿದೆ.
ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ಪ್ರತಿ ಮನೆಯಲ್ಲೂ ತಪಾಸಣೆ ನಡೆಸಲಾಗುತ್ತದೆ. ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗದ ಜಿಲ್ಲೆಗಳಲ್ಲಿ ಏಪ್ರಿಲ್ 20ರ ನಂತರ ಲಾಕ್ ಡೌನ್ ಸಡಿಲಗೊಳಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ
ದೇಶದಲ್ಲಿ ಕೊರೋನಾ ಇನ್ನೂ ಸಮೂಹಕ್ಕೆ ಹೋಗಿಲ್ಲ ಎಂದು ಅಗರವಾಲ್ ಅವರು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ದೇಶಾದ್ಯಂತ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 12 ಸಾವಿರ ಗಡಿ ದಾಟಿದ್ದು, 392 ಮಂದಿ ಮೃತಪಟ್ಟಿದ್ದಾರೆ.
ಕೋವಿಡ್-19 ಗುಣಪಡಿಸಿದ ಮತ್ತು ಬಿಡುಗಡೆಯಾದ ಪ್ರಕರಣಗಳ ಸಂಖ್ಯೆ ಈಗ ರಾಷ್ಟ್ರದಾದ್ಯಂತ 1,305 ರಷ್ಟಿದೆ ಎಂದು ಅಂಕಿ ಅಂಶ ತಿಳಿಸಿದೆ.
ದೇಶದ ಅತ್ಯಂತ ಹೆಚ್ಚು ಹಾನಿಯಾಗಿರುವ ಮಹಾರಾಷ್ಟ್ರದಲ್ಲಿ ಮಂಗಳವಾರ ಬೆಳಿಗ್ಗೆ ಮತ್ತೆ ಹೊಸ ಪ್ರಕರಣಗಳು ಕಂಡುಬಂದಿವೆ.
ದೃಢಪಡಿಸಿದ ಪ್ರಕರಣಗಳ ಸಂಖ್ಯೆ 2,687ಕ್ಕೆ ಏರಿಕೆಯಾಗಿದ್ದು, ಹತ್ತು ಹೊಸ ಸಾವುಗಳು ಸಂಭವಿಸಿದೆ. ಇದರೊಂದಿಗೆ ಇಲ್ಲಿಯವರೆಗೆ ಸಾವಿನ ಸಂಖ್ಯೆ 170ಕ್ಕೆ ತಲುಪಿದೆ, ನಂತರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈಗ 1,561 ಪ್ರಕರಣಗಳು ದಾಖಲಾಗಿದ್ದು, ಇದುವರೆಗೆ 30 ಸಾವು ಸಂಭವಿಸಿದೆ.
Follow us on Social media