ಬೆಂಗಳೂರು: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಶೈಕ್ಷಣಿಕ ವಲಯ ನೆಲಕಚ್ಚಿರುವಂತೆಯೇ ಇತ್ತ ಮುಂಬರುವ ಸಿಇಟಿ ಪರೀಕ್ಷೆಗಳಲ್ಲಿ ಸೋಂಕಿತ ವ್ಯಕ್ತಿಗೂ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆ ಎಸ್ಒಪಿ ಬಿಡುಗಡೆ ಮಾಡಿದೆ.
ಹೌದು.. ರಾಜ್ಯಾದ್ಯಂತ ಇದೇ ಜುಲೈ 30 ಮತ್ತು 31ರಂದು 2020ನೇ ಸಾಲಿನ ಸಿಇಟಿ ಪರೀಕ್ಷೆ ನಡೆಯಲಿದ್ದು, ಕೊರೊನಾ ಸೋಂಕು ದೃಢಪಟ್ಟಿರುವ ವಿದ್ಯಾರ್ಥಿಗಳಿಗೂ ಸಿಇಟಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಪ್ರತ್ಯೇಕ ‘ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ)’ ಪ್ರಕಟಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು. ಇಂತಹ ಪರೀಕ್ಷಾ ಕೇಂದ್ರಗಳಲ್ಲಿ ಆಯಾ ಜಿಲ್ಲೆಗಳ ಜಿಲ್ಲಾ ಆರೋಗ್ಯ ಪ್ರಾಧಿಕಾರ ಹಾಗೂ ಬಿಬಿಎಂಪಿ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಆದೇಶಿಸಲಾಗಿದೆ.
ಅಂತೆಯೇ ಘೋಷಿತ ಕಂಟೈನ್ಮೆಂಟ್ ವಲಯದಲ್ಲಿ ಯಾವುದೇ ಪರೀಕ್ಷಾ ಕೇಂದ್ರವನ್ನು ತೆರೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಲ್ಲದೆ, ಯಾವುದೇ ಪರೀಕ್ಷಾ ಕೇಂದ್ರವನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಬಳಸಲು ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲಾಕೇಂದ್ರದಲ್ಲಿ ಒಂದು ಹೆಚ್ಚುವರಿ ಪರೀಕ್ಷಾ ಕೇಂದ್ರವನ್ನು ಗುರುತಿಸಿ ಕಾಯ್ದಿರಿಸಬೇಕು. ಬೆಂಗಳೂರಿನಲ್ಲಿ ಹೆಚ್ಚು ಪರೀಕ್ಷಾ ಕೇಂದ್ರಗಳಿರುವುದರಿಂದ ನಾಲ್ಕು ಹೆಚ್ಚುವರಿ ಕೇಂದ್ರಗಳನ್ನು ಕಾಯ್ದಿರಿಸಬೇಕು ಎಂದು ತಿಳಿಸಿದೆ.
ಇನ್ನು ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಆಗಮಿಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ ಪರೀಕ್ಷೆ ತೆಗೆದುಕೊಳ್ಳಲು ಅನುಮತಿ ನೀಡಬೇಕು. ಅಂತಹ ವಿದ್ಯಾರ್ಥಿಗಳನ್ನು ಕ್ವಾರಂಟೈನ್ಗೆ ಒಳಪಡಿಸುವುದರಿಂದ ವಿನಾಯಿತಿ ನೀಡಲಾಗಿದ್ದು, ಇವರಿಗೆ ವಿಶೇಷ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡುವಂತೆ ಇಲಾಖೆ ತಿಳಿಸಿದೆ. ಪ್ರತಿ ಪರೀಕ್ಷಾ ಕೇಂದ್ರವನ್ನು ಪರೀಕ್ಷೆಗೆ ಮೂರು ದಿನಗಳ ಮೊದಲು ಸೋಂಕು ನಿವಾರಕ ದ್ರಾವಣದ ಮೂಲಕ ಸ್ವಚ್ಛಗೊಳಿಸಬೇಕು. ಪ್ರತಿ ಪರೀಕ್ಷೆಯ ನಂತರ ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳು, ಪೀಠೋಪಕರಣಗಳನ್ನು ಸ್ಯಾನಿಟೈಸ್ ಮಾಡಿಸಬೇಕು. ಕೋವಿಡ್-19 ಹಿನ್ನೆಲೆಯಲ್ಲಿ ಸುಮಾರು ಎರಡು ಗಂಟೆ ಮುಂಚಿತವಾಗಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು. ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಪ್ರತಿ ಕೊಠಡಿಯಲ್ಲಿ ಗರಿಷ್ಠ 24 ವಿದ್ಯಾರ್ಥಿಗಳನ್ನು ಮಾತ್ರ ಕೂರಿಸಬೇಕು. ಪರೀಕ್ಷಾ ಕೇಂದ್ರದ ಬಳಿ ವಿದ್ಯಾರ್ಥಿಗಳಾಗಲೀ, ಪೋಷಕರಾಗಲೀ ಗುಂಪು ಗೂಡುವುದನ್ನು ಸಂಪೂರ್ಣವಾಗಿ ತಡೆಗಟ್ಟಬೇಕು.
ಇದಲ್ಲದೆ ನೆಗಡಿ, ಕೆಮ್ಮು, ಜ್ವರ, ಗಂಟಲು ಕೆರೆತದಿಂದ ಬಳಲುತ್ತಿರುವ ಅಥವಾ ಕಂಟೈನ್ಮೆಂಟ್ ವಲಯದಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಬೇಕು. ಈ ಕೊಠಡಿಯಲ್ಲಿ ಪ್ರತಿ ಡೆಸ್ಕ್ಗೆ ಒಬ್ಬ ವಿದ್ಯಾರ್ಥಿ ಇರಬೇಕು. ಡೆಸ್ಕ್ಗಳ ನಡುವೆ 6 ಅಡಿ ಅಂತರವಿರಬೇಕು. ಇಂತಹ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮಾಸ್ಕ್ ನೀಡಬೇಕು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ 200 ವಿದ್ಯಾರ್ಥಿಗಳಿಗೆ ಒಂದರಂತೆ ಆರೋಗ್ಯ ತಪಾಸಣಾ ಕೇಂದ್ರವನ್ನು ಮುಖ್ಯದ್ವಾರದಲ್ಲಿ ಸ್ಥಾಪಿಸಬೇಕು. ಪ್ರತಿ ವಿದ್ಯಾರ್ಥಿ ಹಾಗೂ ಪರೀಕ್ಷಾ ಸಿಬ್ಬಂದಿಯ ಥರ್ಮಲ್ ಸ್ಕ್ಯಾನಿಂಗ್ ನಡೆಸಿ, ಸ್ಯಾನಿಟೈಸರ್ ನೀಡಿ, ಮಾಸ್ಕ್ ಧರಿಸಿರುವುದನ್ನು ಖಚಿತಪಡಿಸಿಕೊಂಡು ಪರೀಕ್ಷಾ ಕೇಂದ್ರಗಳ ಒಳಗೆ ಬಿಡಬೇಕು ಎಂದು ತಿಳಿಸಲಾಗಿದೆ.
Follow us on Social media