ಮುಂಬೈ: ಮಾರಕ ಕೊರೋನಾ ವೈರಸ್ ದೇಶಾದ್ಯಂತ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2020 ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಠಾವಧಿಗೆ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅತ್ತ ಪ್ರಧಾನಿ ಮೋದಿ 2ನೇ ಹಂತದ ಲಾಕ್ ಡೌನ್ ಘೋಷಣೆ ಮಾಡಿದ ಬೆನ್ನಲ್ಲೇ ಇಂದು ಕಾನ್ಫರೆನ್ಸ್ ಕಾಲ್ ಮೂಲಕ ಸಭೆ ನಡೆಸಿದ್ದ ಬಿಸಿಸಿಐ ಅಧಿಕಾರಿಗಳು ಐಪಿಎಲ್ 2020 ಟೂರ್ನಿಯನ್ನು ಅನಿರ್ದಿಷ್ಠಾವಧಿಗೆ ಮುಂದೂಡುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಮಹತ್ವದ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಐಪಿಎಲ್ ಚೇರ್ಮನ್ ಬ್ರಿಜೇಷ್ ಪಟೇಲ್, ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಮತ್ತು ಐಪಿಎಲ್ ಸಿಒಒ ಹೇಮಂಗ್ ಅಮಿನ್ ಪಾಲ್ಗೊಂಡಿದ್ದರು.
ಸಭೆ ಬಳಿಕ ಬಿಸಿಸಿಐ ಪದಾಧಿಕಾರಿಗಳು ಐಪಿಎಲ್ ನ ಎಲ್ಲ 8 ಫ್ರಾಂಚೈಸಿಗಳು ಮತ್ತು ಪ್ರಸಾರಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಐಪಿಎಲ್ ಟೂರ್ನಿಯನ್ನು ರದ್ದು ಮಾಡಿಲ್ಲ. ಬದಲಾಗಿ ಮುಂದೂಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಕೊರೋನಾ ವೈರಸ್ ಭಾರತದಲ್ಲಿ ದಾಳಿ ಮಾಡಿದ ಬಳಿಕ ಸತತ 2ನೇ ಬಾರಿಗೆ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ.
ಮೂಲಗಳ ಪ್ರಕಾರ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಂದು ಕೇಂದ್ರ ಸರ್ಕಾರ ಲಾಕ್ ಡೌನ್ ಅನ್ನು ತೆರವುಗೊಳಿಸಿದ್ದರೆ ಜೂನ್ ತಿಂಗಳಲ್ಲಿ ಐಪಿಎಲ್ ಆಯೋಜಿಸುವ ಕುರಿತು ಬಿಸಿಸಿಐ ಚಿಂತನೆ ನಡೆಸಿತ್ತು. ಕೊರೋನಾ ವೈರಸ್ ಹರಡದಂತೆ ಜೂನ್ ನಲ್ಲಿ ಪ್ರೇಕ್ಷಕರಿಲ್ಲದ ಟೂರ್ನಿ ಆಯೋಜನೆಗೆ ಬಿಸಿಸಿಐ ಯೋಜಿಸಿತ್ತು ಎನ್ನಲಾಗಿದೆ.
Follow us on Social media