ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗದ ನಡುವೆಯೂ ಕಿಚ್ಚ ಸುಧೀಪ್ ನಾಯಕ ನಟನಾಗಿ ಅಭಿನಯಿಸುತ್ತಿರುವ ‘ಫ್ಯಾಂಟಮ್ ಚಿತ್ರದ ಚಿತ್ರೀಕರಣವನ್ನು ಪುನರ್ ಆರಂಭಿಸಲಾಗುತ್ತಿದೆ.
ತೆಲಂಗಾಣದ ಅನ್ನಪೂರ್ಣ ಸ್ಟುಡಿಯೋದಲ್ಲಿ ಮುಂದಿನ ತಿಂಗಳಿನಿಂದ ಚಿತ್ರೀಕರಣ ಪುನರ್ ಆರಂಭವಾಗುತ್ತಿದ್ದು, ಬೃಹತ್ ಸೆಟ್ ನಿರ್ಮಾಣದ ಕೆಲಸ ಜೂನ್ 15ರಂದು ಆರಂಭವಾಗಲಿದೆ . ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದ ನಂತರ ನಿರ್ದೇಶಕರು ಹಾಗೂ ನಟ ಸುದೀಪ್ ಅವರೊಂದಿಗೆ ಸಮಾಲೋಚನೆ ನಡೆಸಿ ಚಿತ್ರ ನಿರ್ಮಾಣ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ.
ಸುದೀಪ್, ನಿರ್ದೇಶಕ ಅನುಪ್ ಭಂಡಾರಿ, ಸೇರಿದಂತೆ ಕೆಲ ನಿರ್ದಿಷ್ಟ ಮಂದಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದು, ಚಿತ್ರೀಕರಣಕ್ಕೂ ಮುನ್ನ ಜೂನ್ 21ರಿಂದ ಏಳು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರುವುದಾಗಿ ಚಿತ್ರರಂಗದಲ್ಲಿ ಜಾಕ್ ಮಂಜು ಎಂದೇ ಹೆಸರಾಗಿರುವ ಮಂಜುನಾಥ್ ಗೌಡ ತಿಳಿಸಿದ್ದಾರೆ.
ಸರ್ಕಾರ ನೀಡಿರುವ ಎಲ್ಲ ಸಲಹೆ ಸೂಚನೆಗಳನ್ನು ಇಡೀ ತಂಡ ಪಾಲಿಸಲಿದೆ, ಸೆಟ್ ನಲ್ಲಿ ಒಬ್ಬರು ಡಾಕ್ಟರ್ ಹಾಗೂ ಇಬ್ಬರು ನರ್ಸ್ ಗಳು ಇರಲ್ಲಿದ್ದಾರೆ. ಅಂದಿನ ಚಿತ್ರೀಕರಣಕ್ಕೆ ಬೇಕಾಗುವಷ್ಟು ಕೆಲಸಗಾರರನ್ನು ಮಾತ್ರ ಬಳಸಿಕೊಳ್ಳುತ್ತೇವೆ. ಲೈಟಿಂಗ್, ಮೆಕಫ್ ಮ್ಯಾನ್ ಮತ್ತಿತರ ಕೆಲಸಗಳು ಮುಗಿದ ಕೂಡಲೇ ಅವರನ್ನು ಮನೆಗೆ ಕಳುಹಿಸಲಾಗುವುದು, ಸುರಕ್ಷತೆ ದೃಷ್ಟಿಯಿಂದ ಉಳಿಯಲು ಬಯಸುವ ಮತ್ತು ಆಗಾಗ್ಗೆ ತೆರಳಲು ಸಾಧ್ಯವಿಲ್ಲದಿರುವಂತಹ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುತ್ತಿರುವುದಾಗಿ ಹೇಳಿದರು.
ಕೊರೋನಾ ಸಂಕಟದ ನಡುವೆ ಚಿತ್ರೀಕರಣ ಪುನರ್ ಆರಂಭಕ್ಕೆ ಸಮ್ಮತಿಸಿದ ಸುದೀಪ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ತೆಲಂಗಾಣದ ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದು, ಶೀಘ್ರದಲ್ಲಿ ಚಿತ್ರೀಕರಣ ಆರಂಭ ಮಾಡಲು ನಿರ್ಧರಿಸಲಾಗುವುದು, ಈ ಸಂಬಂಧ ನಿರ್ದೇಶಕರು, ಕಲೆ ನಿರ್ದೇಶಕರು, ಕ್ಯಾಮರಾಮನ್ ಮತ್ತಿತರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಮಂಜುನಾಥ್ ಗೌಡ ತಿಳಿಸಿದರು.
ಶಾಲಿನಿ ಆರ್ಟ್ ಬ್ಯಾನರ್ ಅಡಿಯಲ್ಲಿ ಫ್ಯಾಂಟರ್ ಚಿತ್ರ ನಿರ್ಮಾಣವಾಗುತ್ತಿದ್ದು, ಮಂಜುನಾಥ್ ಗೌಡ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಈ ಸುದೀಪ್ ಅವರೊಂದಿಗೆ ಅನುಪ್ ಭಂಡಾರಿ ಕೂಡಾ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತರ ಪಾತ್ರದಾರಿಗಳ ವಿಚಾರ ಮುಂದಿನ ದಿನಗಳಲ್ಲಿ ತಿಳಿಯುವ ಸಾಧ್ಯತೆ ಇದೆ. ಕರ್ನಾಟಕ ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡಿದ ನಂತರ ಹೈದ್ರಾಬಾದ್ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.
Follow us on Social media