ಬೆಂಗಳೂರು : ಕೊರೋನಾ ವೈರಸ್ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಸೂಚನೆಯನ್ನು ನಾಗರಿಕರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ರಾತ್ರಿ ಮಧ್ಯರಾತ್ರಿ 12 ಗಂಟೆಯಿಂದ ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದಾರೆ.
ಇಂದು ಮಧ್ಯರಾತ್ರಿಯಿಂದ ದೇಶಾದ್ಯಂತ 21 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಆಗಲಿದೆ. ಇದು ಜನತಾ ಕರ್ಪ್ಯೂಗಿಂತ ಕಠಿಣವಾಗಲಿದೆ. ಒಂದು ರೀತಿಯಲ್ಲಿ ಕರ್ಪ್ಯೂವೇ ಆಗಿರಲಿದೆ. ಇದು ದೇಶದ ಪ್ರತಿ ರಾಜ್ಯ, ಜಿಲ್ಲೆ, ಗ್ರಾಮಗಳಿಗೆ ಅನ್ವಯವಾಗಲಿದೆ ಎಂದರು.
ಈ 21 ದಿನಗಳ ಕಾಲ ನಾವು ಎಚ್ಚರಿಕೆಯಿಂದಿರುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಭಾರತ 21 ವರ್ಷಗಳ ಕಾಲ ಹಿಂದಕ್ಕೆ ಹೋಗುತ್ತದೆ. ಜನರು ಮನೆಯಿಂದ ಹೊರಗೆ ಹೋಗುವ ಒಂದು ಹೆಜ್ಜೆ ಕೂಡ ಕೊರೋನಾದಂತಹ ಗಂಭೀರ ಸಮಸ್ಯೆಗೆ ಆಹ್ವಾನ ನೀಡಬಹುದು.
ಕೊರೋನಾ ಸೋಂಕಿತ ವ್ಯಕ್ತಿ ಆರಂಭದಲ್ಲಿ ಆರೋಗ್ಯವಂತನಾಗಿಯೇ ಇರುತ್ತಾನೆ ಎಂಬುದನ್ನು ಜನರು ಮರೆಯಬಾರದು. ಆದ್ದರಿಂದ ಜನರು ಈಗ ಎಲ್ಲಿದ್ದಾರೋ ಅಲ್ಲಿಯೇ ಇರಬೇಕು. ಹೊರಗೆ ಬರಬಾರದು ಎಂದು ಕರೆ ನೀಡಿದರು.
ಈ ಕರ್ಫ್ಯೂ ದೇಶದ ಜನರ ಸುರಕ್ಷತೆಗೆ ಅತಿ ಅಗತ್ಯ. ಇದನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಲೇಬೇಕು. ವಿಶ್ವ ಆರೋಗ್ಯಸಂಸ್ಥೆಯ ವರದಿ ಪ್ರಕಾರ, ರ್ಓವ ಸೋಂಕಿತ ವ್ಯಕ್ತಿ ಒಂದು ವಾರದಲ್ಲಿ ಹತ್ತಾರು ಜನರಿಗೆ ಸೋಂಕು ಹಬ್ಬಿಸಬಲ್ಲನು. ಆದ್ದರಿಂದ ಇದನ್ನು ತಡೆಯುವುದು ಅನಿವಾರ್ಯ ಎಂದರು.