ಬೆಳಗಾವಿ: ಕಳೆದ ವರ್ಷ ಮಹಾಮಾರಿ ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಶಾಲಾ ವಾರ್ಷಿಕ ಅವಧಿಯಲ್ಲಿ ಕಡಿತವಾಗಿದ್ದು, ಈ ಬಾರಿ ಬೇಸಿಗೆ ರಜೆ ಕಡಿತ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಖಾನಾಪುರದ ಶಾಲೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್ ಅವರು, ಮುಂಬರುವ ಬೇಸಿಗೆ ರಜೆ ದಿನಗಳನ್ನು ಕಡಿತ ಮಾಡಲಾಗುವುದು ಎಂದು ಹೇಳಿದ್ದಾರೆ.
ಕಳೆದುಹೋದ ಸಮಯವನ್ನು ಸರಿದೂಗಿಸಲು ಮತ್ತು ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿಳಂಬವಾಗುವುದನ್ನು ತಡೆಯಲು, ಶಿಕ್ಷಣ ಇಲಾಖೆಯು ರಜಾದಿನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಯೋಜನೆಯನ್ನು ರೂಪಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಸಕಾಲಕ್ಕೆ ಶಾಲಾ, ಕಾಲೇಜು ಪ್ರಾರಂಭ ಮಾಡದೆ ಇರುವುದರಿಂದ ಶಿಕ್ಷಣದಿಂದ ಮಕ್ಕಳು ದೂರ ಸರಿಯುತ್ತಿದ್ದಾರೆ. ಅಲ್ಲದೆ ಬಾಲ್ಯ ವಿವಾಹದ ಸಂಖ್ಯೆಯು ಹೆಚ್ಚಳವಾಗಿದೆ ಎಂದು ಸಚಿವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ, ಪರೀಕ್ಷೆಗಳು ಜೂನ್‌ನಲ್ಲಿ ಕೊನೆಗೊಳ್ಳುತ್ತವೆ ಮತ್ತು ಮುಂದಿನ ಶೈಕ್ಷಣಿಕ ವರ್ಷವು ಜುಲೈ ಆರಂಭದಲ್ಲಿ ಪ್ರಾರಂಭವಾಗುವುದರಿಂದ, ಬೇಸಿಗೆ ರಜಾದಿನಗಳನ್ನು ಕಡಿತ ಮಾಡಲಾಗುವುದು. ಆದರೆ ರದ್ದುಗೊಳಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Follow us on Social media