ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಲಾಕ್’ಡೌನ್ ಪರಿಣಾಮದಿಂದಾಗಿ ರಾಜ್ಯದ ಬೊಕ್ಕಸಕ್ಕೆ ಬರೋಬ್ಬರಿ ರೂ.10,675 ಕೋಟಿ ನಷ್ಟ ಎದುರಾಗಿದೆ ಎಂದು ತಿಳಿದುಬಂದಿದೆ.
2020-21ನೇ ಆರ್ಥಿಕ ವರ್ಷದಲ್ಲಿ ತೆರಿಗೆ, ಅಬಕಾರಿ, ಅಂಚೆ ಚೀಟಿ, ನೋಂದಾವಣಿ, ಸಾರಿಗೆ (ಮೋಟಾರು ವಾಹನ) ಗಳಿಂದ ಬರಬೇಕಿದ್ದ ಆದಾಯ ಲಾಕ್’ಡೌನ್ ಪರಿಣಾಮ ಕಳೆದ ಏಪ್ರಿಲ್ ತಿಂಗಳಿನಲ್ಲಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2020-2021ರ ಬಜೆಟ್ ಭಾಷಣದಲ್ಲಿ ಜಿಎಸ್ಟಿ ಪರಿಹಾರ ಸೇರಿದಂತೆ ರಾಜ್ಯದ ಸ್ವ ತೆರಿಗೆ ಆದಾಯವನ್ನು 1,28,107 ಕೋಟಿ ರೂ.ಬರಲಿದೆ ಎಂದು ಅಂದಾಜಿಸಿದ್ದರು.
ಲಾಕ್’ಡೌನ್ ಸಡಿಲಗೊಳಿಸಿದ ಪರಿಣಾ ಇದೀಗ ಆರ್ಥಿಕ ಚಟುವಟಿಕೆಗಳು ಭಾಗಶಃ ಪುನರಾರಂಭವಾಗುವುದರೊಂದಿಗೆ ಆದಾಯ ಸಂಗ್ರಹ ಪ್ರಾರಂಭವಾಗಿದೆ. ಅಂತಿಮವಾಗಿ ಮೇ ತಿಂಗಳಿನಿಂದ ಮದ್ಯ ಮಾರಾಟ ಕೂಡ ಆರಂಭವಾಗಿದೆ. ಏಪ್ರಿಲ್‌ನಲ್ಲಿ ಅಂದಾಜು ಆದಾಯ ನಷ್ಟವು 10,675 ಕೋಟಿ ರೂ. ಆಗಿದ್ದು, ಇದು ಬಜೆಟ್ ಗುರಿ ಅಂದಾಜಿನ 1/12ರಷ್ಟಿದೆ.
ಏಪ್ರಿಲ್ ತಿಂಗಳಿನಲ್ಲಿ ಆದಾಯ ಸಂಗ್ರಹ ಸಂಪೂರ್ಣವಾಗಿ ಬಂದ್ ಆಗಿತ್ತು. ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಆದಾಯ ಸಂಗ್ರಹವಾಗಿಲ್ಲ. ಜಿಎಸ್ಟಿ ಸಂಗ್ರಹ ಹಾಗೂ ಕೈಗಾರಿಕಾ ಚಟುವಟಿಕೆಗಳು ರಾಜ್ಯಕ್ಕೆ ದೊಡ್ಡ ಮಟ್ಟದಲ್ಲಿ ಆದಾಯ ತರಲಿದ್ದು, ಲಾಕ್’ಡೌನ್ ಪರಿಣಾಮ ಈ ಎಲ್ಲಾ ಕಾರ್ಯಗಳು ಸ್ಥಗಿತಗೊಂಡಿದ್ದವು. ಆರ್ಥಿಕ ಚಟುವಟಿಕೆಗಳು ಆರಂಭಗೊಂಡಿದ್ದರೂ, ಕೂಡಲೇ ಆದಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದಾಯ ಸಂಗ್ರಹ ಪ್ರಕ್ರಿಯೆಗಳು ಪುನರಾರಂಭಗೊಳ್ಳಲು ಮತ್ತಷ್ಟು ಕಾಲಾವಕಾಶ ಬೇಕಾಗುತ್ತದೆ ಎಂದು ವಿತ್ತ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಏಪ್ರಿಲ್ ತಿಂಗಳಿನಲ್ಲಿ ವಾಣಿಜ್ಯ ತೆರಿಗೆ ರೂ.6,870.25 ಕೋಟಿ, ಅಬಕಾರಿ ರೂ.1,891.6, ಅಂಚೆ ಮತ್ತು ನೋಂದಾವಣಿ ರೂ.1,054 ಕೋಟಿ ಹಾಗೂ ಸಾರಿಗೆ ರೂ.592.91 ಕೋಟಿ ಸಂಗ್ರಹವಾಗಿಬೇಕಿತ್ತು.
2020-2021ರ ಆರ್ಥಿಕ ವರ್ಷದಲ್ಲಿ ಸುಮಾರು 1/12 ನೇ ಅಂದಾಜು ಆದಾಯವನ್ನು ಕಳೆದುಕೊಳ್ಳಲಾಗಿದ್ದು, ಆರ್ಥಿಕ ಕೊರತೆಯಿರುವ ಕರ್ನಾಟಕದಲ್ಲಿ ಆರಂಭಿಕ ಆದಾಯ ಗುರಿಯನ್ನು 22,700 ಕೋಟಿ ಎಂದು ನಿರೀಕ್ಷಿಸಲಾಗಿತ್ತು. ಈ ನಡುವೆ ಅಬಕಾರಿ ಸುಂಕದ ಹೆಚ್ಚಳ ರೂ 2,530 ಕೋಟಿ ತಂದುಕೊಟ್ಟಿದ್ದು, ಇದರಿಂದ ಅಂತಹ ಪರಿಣಾಮಗಳಾಗುವ ಸಾಧ್ಯತೆಗಳಿಲ್ಲ.
ನವೆಂಬರ್ 2019ರವರೆಗೆ ಜಿಎಸ್ಟಿ ಪರಿಹಾರವನ್ನು ಸ್ವೀಕರಿಸಲಾಗಿದ್ದು, ಇನ್ನೂ ರೂ.5,000 ಕೋಟಿ ಬಾಕಿಯಿದೆ ಎಂದು ಹಣಕಾಸು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
Follow us on Social media