ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ, ಸೈಕಲ್ ಜಾಥಾ ಹಮ್ಮಿಕೊಂಡಿದೆ.
ಇಂದು ಬೆಳಗ್ಗೆ 10 ಗಂಟೆಯಿಂದಲೇ ಆರಂಭವಾದ ಜಾಥಾದಲ್ಲಿ ಸಾವಿರಾರು ಮಂದಿ ಭಾಗವಹಿಸಿರುವುದರಿಂದ ಸುಮಾರು 3 ಕಿಲೋ ಮೀಟರ್ ವರೆಗೆ ಸಂಚಾರ ದಟ್ಟಣೆ ಉಂಟಾಗಿದೆ. ಕೊರೋನಾ ಸೋಂಕು ಬೆಂಗಳೂರು ನಗರದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಈ ಬೃಹತ್ ಪ್ರಮಾಣದಲ್ಲಿ ಪ್ರತಿಭಟನಾ ಮೆರವಣಿಗೆ ಬೇಕಿತ್ತೇ ಎಂಬ ಪ್ರಶ್ನೆ ಎದುರಾಗಿದೆ.
ಕೇಂದ್ರ ಸರ್ಕಾರ ಕೊರೋನಾ ಆರ್ಥಿಕ ಸಂಕಷ್ಟದ ನಡುವೆ ಇಂಧನ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡಿ ಜನರ ಬದುಕಿಗೆ ಕೊಳ್ಳೆಹೊಡೆಯುತ್ತಿದೆ ಎಂದು ಜಾಥಾದಲ್ಲಿ ಭಾಗವಹಿಸಿದ ಮಾಜಿ ಸಿಎಂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಬೈಕನ್ನು ಚಟ್ಟಕ್ಕೆ ಕಟ್ಟಿ ಎತ್ತಿಕೊಂಡು ಹೋಗಿ ಸರ್ಕಾರ ವಿರುದ್ಧ ಇಂಧನ ಬೆಲೆ ಏರಿಕೆ ಮಾಡಿರುವುದಕ್ಕೆ ಪ್ರತಿಭಟನೆ ನಡೆಸಿದರು. ಮುಖಂಡರು ತಮ್ಮ ಮನೆಯಿಂದ ಅಪಾರ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಸೈಕಲ್ ತುಳಿದುಕೊಂಡು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಗೆ ಬಂದಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಯಿತು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಚ್ಚಾ ತೈಲ ಬೆಲೆ ಬ್ಯಾರೆಲ್ ಗೆ 130 ಡಾಲರ್ ಇತ್ತು. ಆಗಲೇ ಪೆಟ್ರೋಲ್, ಡೀಸೆಲ್, ಗ್ಯಾಸ್ ಗೆ ಕಾಂಗ್ರೆಸ್ ಸರ್ಕಾರ 2.41 ಲಕ್ಷ ಕೋಟಿ ರೂ ಸಬ್ಸಿಡಿ ನೀಡುತ್ತಿತ್ತು. ಈಗ ಕಚ್ಚಾ ತೈಲದ ಬ್ಯಾರೆಲ್ ಗೆ ಬೆಲೆ 40 ಡಾಲರ್ ಆಸುಪಾಸು ಇದೆ. ಈಗ ತೈಲ ಬೆಲೆ 25 ರೂ. ಲೀಟರ್ ಗೆ ಮಾರಬೇಕು. ಕೇಂದ್ರ ಸರ್ಕಾರ ಒಂದು ರೂ. ಸಬ್ಸಿಡಿ ನೀಡುತ್ತಿಲ್ಲ. ಅಬಕಾರಿ ಸುಂಕ ಏರಿಸಿದ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ ಎಂದು ಟೀಕಿಸಿದರು.
Follow us on Social media