ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ನಿಂದ ಆಗಿರುವ ನಷ್ಟವನ್ನು ತುಂಬಲು ರಾಜ್ಯ ಸರ್ಕಾರ ಆದಾಯದ ಮೂಲವನ್ನು ಹುಡುಕುತ್ತಿದೆ. ಇನ್ನೊಂದೆಡೆ ರಾಜ್ಯದ ಹಲವು ಕಡೆಗಳಲ್ಲಿ ಲಾಕ್ ಡೌನ್ ನಿಂದ ಸಿಕ್ಕಿಹಾಕಿಕೊಂಡಿರುವ ಕಾರ್ಮಿಕರು ತಮ್ಮೂರಿಗೆ ಹೋಗಲು ತೀವ್ರ ಪ್ರಯತ್ನಿಸುತ್ತಿದ್ದಾರೆ.
ಹೀಗೆ ಊರಿಗೆ ಹೋಗಲು ಪ್ರಯತ್ನಿಸುತ್ತಿರುವ ಕಾರ್ಮಿಕರಿಗೆ ಅವರವರ ಊರಿಗೆ ತೆರಳಲು ಬಸ್ ವ್ಯವಸ್ಥೆಯನ್ನೇನೋ ರಾಜ್ಯಸರ್ಕಾರ ಮಾಡುತ್ತಿದೆ. ಆದರೆ ಇತರ ಸಮಯಗಳಿಗಿಂತ ಶೇಕಡಾ 120ರಷ್ಟು ಹೆಚ್ಚು ಪ್ರಯಾಣವೆಚ್ಚವನ್ನು ನೀಡಿ ಕಾರ್ಮಿಕರು ತಮ್ಮೂರಿಗೆ ತೆರಳಬೇಕಾಗಿದೆ.
ಉದಾಹರಣೆಗೆ ಬೀದರ್ ಗೆ ಬೆಂಗಳೂರಿನಿಂದ ಒಂದು ಕುಟುಂಬದ ನಾಲ್ವರು ಹೋಗಬೇಕಿದೆ ಎಂದು ಭಾವಿಸಿ. ಕೆಎಸ್ ಆರ್ ಟಿಸಿ ಬಸ್ ನಲ್ಲಿ ಹೋಗಬೇಕೆಂದರೆ ಅವರು 7,935 ರೂಪಾಯಿ ನೀಡಬೇಕು. ಇಷ್ಟೊಂದು ಹಣ ಕೂಲಿಕಾರ್ಮಿಕರು ಹೇಗೆ ಕೊಡುವುದು ಎಂದು ನೀವು ಯೋಚಿಸುತ್ತಿರಬಹುದು. ಅದಕ್ಕೆ ಸರ್ಕಾರ ಮಾಡಿರುವ ನಿಯಮ ಹೀಗಿದೆ. ಬೀದರ್ ಗೆ ನೀವು ನಾಲ್ಕು ಮಂದಿ ಮಾತ್ರ ಹೋದರೆ ಸಾಲದು, ನಿಮ್ಮ ಜೊತೆ ಇತರ 26 ಮಂದಿ ಪ್ರಯಾಣಿಕರಿದ್ದರೆ ಎಲ್ಲರೂ ಇಷ್ಟು ಮೊತ್ತವನ್ನು ಹಂಚಿಕೊಂಡು ಟಿಕೆಟ್ ಮಾಡಿದರೆ ಸರ್ಕಾರ ಬಸ್ಸು ಒದಗಿಸಿಕೊಡುತ್ತದೆ.
ಒಂದು ಊರಿಗೆ ಹೋಗುವ 30 ಕಾರ್ಮಿಕರಿದ್ದಾರೆ ಎಂದಿಟ್ಟುಕೊಳ್ಳಿ. ಹೋಗುವ, ಬರುವ ವೆಚ್ಚ ಸೇರಿ ಪ್ರತಿ ಕಿಲೋಮೀಟರ್ ಗೆ 39 ರೂಪಾಯಿಯಂತೆ ವಿಭಾಗಿಸಿಕೊಳ್ಳಬೇಕು ಎನ್ನುತ್ತಾರೆ ಕೆಎಸ್ ಆರ್ ಟಿಸಿಯ ಬೆಂಗಳೂರು ವಿಭಾಗದ ನಿಯಂತ್ರಕ ಬಿಟಿ ಪ್ರಭಾಕರ್ ರೆಡ್ಡಿ. ಆದರೆ ಕೆಲಸ, ಕೂಲಿಯಿಲ್ಲದೆ ಹತ್ತಾರು ದಿನಗಳಿಂದ ತಮ್ಮೂರಿಗೆ ಹೋಗಲು ಕಾಯುತ್ತಿರುವ ಕಾರ್ಮಿಕರು ಈ ಬಗ್ಗೆ ಸಹಾಯಕ್ಕೆ ಮುಖ್ಯಮಂತ್ರಿ ಕಚೇರಿಯ ಮೊರೆ ಹೋಗಿದ್ದಾರೆ.
ಕೈಯಲ್ಲಿ 500 ರೂಪಾಯಿ ಇಲ್ಲ, ಆದರೆ ನನ್ನ ಕುಟುಂಬದ 12 ಮಂದಿಯನ್ನು ಯಾದಗಿರಿಗೆ ಕರೆದುಕೊಂಡು ಹೋಗಲು 16 ಸಾವಿರದ 932 ರೂಪಾಯಿ ಕೊಡಬೇಕು. ಅಷ್ಟೊಂದು ಹಣವನ್ನು ಎಲ್ಲಿಂದ ಭರಿಸಬೇಕು. ನಮಗೆ ಇಲ್ಲಿ ಕೆಲಸ, ಸಂಬಳ ಬಂದರೆ ನಾವ್ಯಾಕೆ ಊರಿಗೆ ಹೋಗಬೇಕು. ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಬೇಡಿಕೊಳ್ಳುತ್ತಿದ್ದಾರೆ ಯಾದಗಿರಿಯ ಶರಣಪ್ಪ.
ಈ ಮಧ್ಯೆ ವಲಸೆ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು, ಸರ್ಕಾರ ವಲಸೆ ಕಾರ್ಮಿಕರನ್ನು ನೋಡಿಕೊಳ್ಳುತ್ತಿರುವವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕಾರ್ಮಿಕರನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಿದೆ ಎಂದು ಸಾರ್ವಜನಿಕ ಆರೋಗ್ಯ ಕಾರ್ಯಕರ್ತ ಡಾ ಸಿಲ್ವಿಯಾ ಕರ್ಪಗಂ ಹೇಳುತ್ತಾರೆ.
ಜನರಿಗೆ ಯಾವುದೇ ಸೌಲಭ್ಯ, ವ್ಯವಸ್ಥೆ ಕೊಡದೆ ಏಕಾಏಕಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಕಾರ್ಮಿಕರು ಕೂಲಿನಾಲಿ ಮಾಡಿಕೊಂಡು ಸಂಪಾದನೆ ಮಾಡಿ ಜೀವನ ಸಾಗಿಸುತ್ತಿದ್ದರು. ಇದೀಗ ಅವರು ಭಿಕ್ಷೆ ಬೇಡುವಂತೆ ಆಗಿದೆ ಪರಿಸ್ಥಿತಿ. ಇದು ಎಂತಹ ವ್ಯವಸ್ಥೆ ಎಂದು ಕಾರ್ಮಿಕರು ಮತ್ತು ಕಾರ್ಯಕರ್ತರು ಕೇಳುತ್ತಿದ್ದಾರೆ.
ಆದರೆ ಪ್ರಭಾಕರ್ ರೆಡ್ಡಿಯವರು ಹೇಳುವುದೇ ಬೇರೆ. ಕಳೆದ ಗುರುವಾರದವರೆಗೆ ಸರ್ಕಾರ ಸುಮಾರು 25 ಬಸ್ಸುಗಳನ್ನು ಉಚಿತ ಪ್ರಯಾಣಕ್ಕೆ ಬಿಟ್ಟಿತ್ತು. ನಿನ್ನೆಯಿಂದ ಮಾತ್ರ ಬಸ್ ಟಿಕೆಟ್ ದರವನ್ನು ಕೊಡಿ ಎಂದು ಕೇಳುತ್ತಿದ್ದೇವೆ. ಉಚಿತವಾಗಿ ಪ್ರಯಾಣಿಸುವಾಗ ಹಲವು ಸಾಮಾನ್ಯರು ತಾವು ಕಾರ್ಮಿಕರು ಎಂದು ಹೇಳಿಕೊಂಡು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಇದರಿಂದಾಗಿ ನಾವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿ ಬಂತು. ಕೆಎಸ್ ಆರ್ ಟಿಸಿಗೂ ಹಣ ಬೇಕಾಗುತ್ತದೆ ಎನ್ನುತ್ತಾರೆ.
Follow us on Social media