ಬೆಂಗಳೂರು: ನಗರದಲ್ಲಿ ಕೊರೊನಾ ವೈರಸ್ ಸೋಂಕು ತಡೆಗಟ್ಟುವ ದೃಷ್ಟಿಯಿಂದ ನಗರದಲ್ಲಿ ಮಂಗಳವಾರ ಮಧ್ಯರಾತ್ರಿ 12 ಗಂಟೆಯಿಂದ ಏಪ್ರಿಲ್ 20ರ ಮಧ್ಯರಾತ್ರಿ 12ರವರೆಗೆ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಆದೇಶ ಹೊರಡಿಸಿದ್ದಾರೆ.
ಕೋವಿಡ್-19 ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೇಂದ್ರ ಗೃಹ ಮಂತ್ರಾಲಯವು ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಫೆಬ್ರುವರಿ 15ರ ನಂತರ ಭಾರತಕ್ಕೆ ವಿದೇಶಗಳಿಂದ ಆಗಮಿಸಿದವರು ಕಟ್ಟುನಿಟ್ಟಾಗಿ ಕ್ವಾರಂಟೈನ್ ಆದೇಶ ಪಾಲಿಸಬೇಕು. ಆರೋಗ್ಯ ರಕ್ಷಣಾ ಸಿಬ್ಬಂದಿ ಕ್ವಾರಂಟೈನ್ಗೆ ಸೂಚಿಸಿರುವವರೂ ಸಹ ಆದೇಶ ಪಾಲಿಸಬೇಕು. ತಪ್ಪಿದರೆ ಐಪಿಸಿ 188ರ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು.
ನಿರ್ಬಂಧ ಆದೇಶದಿಂದ ವಿನಾಯ್ತಿ ನೀಡಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಸಹ ಆರೋಗ್ಯ ಇಲಾಖೆ ಕಾಲಕಾಲಕ್ಕೆ ನೀಡುವ ಆದೇಶಗಳನ್ನು ಪಾಲಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51ರಿಂದ 60 ಮತ್ತು ಪಿಪಿಸಿ 188ರ ಅನ್ವಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ಅಯುಕ್ತರು ಎಚ್ಚರಿಸಿದ್ದಾರೆ. ವೈದ್ಯಕೀಯ ಸಂಸ್ಥೆಗಳು ಮತ್ತು ಸೇವೆಗಳು ಮುಂದುವರಿಯುತ್ತವೆ. ವೈದ್ಯಕೀಯ ಸಿಬ್ಬಂದಿ ಮತ್ತು ಪರಿಕರಗಳ ಸಾರಿಗೆಗೆ ಅನುಮತಿ ನೀಡಲಾಗಿದೆ.
ನಿರ್ಬಂಧಗಳು
* ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಕಚೇರಿಗಳು, ಅಧೀನ ಕಚೇರಿಗಳು ಮತ್ತು ಸ್ವಾಯುತ್ತ ಕಚೇರಿಗಳನ್ನು ಮುಚ್ಚತಕ್ಕದ್ದು.
* ವಾಣಿಜ್ಯ ಮಳಿಗೆಗಳು, ಕೈಗಾರಿಕಾ ಘಟಕಗಳು ಮತ್ತು ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸುವಂತಿಲ್ಲ.
* ವಿಮಾನಯಾನ, ರೈಲು ಮತ್ತು ರಸ್ತೆ ಸಾರಿಗೆ ಕಾರ್ಯನಿರ್ವಹಿಸುವಂತಿಲ್ಲ
* ಹೊಟೆಲ್ ಮತ್ತು ಆತಿಥ್ಯ ಸೇವೆಗಳಿಗೆ ಕಡಿವಾಣ ಹಾಕಲಾಗಿದೆ
* ಎಲ್ಲ ರೀತಿಯ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಬೇಕು
* ಪೂಜಾ ಸ್ಥಳಗಳಲ್ಲಿ ಸಾರ್ವಜನಿಕರಿಗೆ ನಿರ್ಬಂಧ. ಅನುಮತಿಯಿಲ್ಲದೆ ಧಾರ್ಮಿಕ ಸಭೆ ನಡೆಸುವಂತಿಲ್ಲ.
* ಅಂತ್ಯಕ್ರಿಯೆಯಲ್ಲಿ 20ಕ್ಕಿಂತ ಹೆಚ್ಚು ವ್ಯಕ್ತಿಗಳು ಸೇರುವಂತಿಲ್ಲ
* ಎಲ್ಲಾ ರೀತಿಯ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ.
ವಿನಾಯ್ತಿಗಳು
* ಆರೋಗ್ಯ, ಅತ್ಯಗತ್ಯ ಮತ್ತು ತುರ್ತು ನಿರ್ವಹಣಾ ಸಂಸ್ಥೆಗಳು ಮತ್ತು ಸಿಬ್ಬಂದಿ
* ಎಪಿಎಂಸಿ ನಿರ್ವಹಿಸುವ ಮಂಡಿಗಳು, ಕೃಷಿ ಉತ್ಪನ್ನಗಳ ಸಂಗ್ರಹದಲ್ಲಿ ತೊಡಗಿರುವ ಏಜೆನ್ಸಿಗಳುವಿನಾಯಿತಿ ನೀಡಲಾಗಿದೆ.