ಬೆಂಗಳೂರು: ಎಲ್ಲರ ಒಳಿತಿಗಾಗಿ, ಎಲ್ಲಾ ವಿಘ್ನಗಳನ್ನು ತೊಡೆದು ಹಾಕಿ ಕಾರ್ಯಗಳು ಸರಾಗವಾಗಿ ಸಾಗಲಿ ಎಂದು ಪ್ರಾರ್ಥಿಸಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆ ಕೆಪಿಸಿಸಿಯ ನೂತನ ಕಚೇರಿಯ ಸಭಾಂಗಣದಲ್ಲಿ ಹೋಮ-ಹವನ ನೆರವೇರುತ್ತಿದೆ.
ಜ್ಯೋತಿಷಿ ಡಾ. ನಾಗರಾಜ್ ಆರಾಧ್ಯ ಹಾಗೂ ಅರ್ಚಕ ಮಹಂತೇಶ್ ಭಟ್ ನೇತೃತ್ವದಲ್ಲಿ ಮೂವರು ಅರ್ಚಕರಿಂದ ಗಣಪತಿ ಹೋಮ, ವಾಸ್ತು ಹೋಮ, ರಕ್ಷೋಜ್ಞ ಹೋಮ, ಭೂ ವರಹ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಅಷ್ಟ ಲಕ್ಷ್ಮಿ ಹೋಮ, ಗಾಯಿತ್ರಿ ಹೋಮ ನಡೆಯುತ್ತಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ವಹಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತು ಮುಂದೆ ಎಲ್ಲಾ ಕಾರ್ಯಗಳು ಯಾವುದೇ ಅಡೆತಡೆಗಳು ಎದುರಾಗದೆ ನೆರವೇರಬೇಕೆಂದು ಹಾಗೂ ನಾಡಿನ ಒಳಿತಿಗಾಗಿ ಹೋಮ ಮಾಡಲಾಗುತ್ತಿದ್ದು, ಬೆಳಗ್ಗೆ 5 ಗಂಟೆಗೆ ಆರಂಭವಾಗಿರುವ ಹೋಮ ಬೆಳಗ್ಗೆ 11 ಗಂಟೆಗೆ ಪೂರ್ಣಾಹುತಿಯಾಗಲಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಇಂದು ಹೋಮ ಮುಗಿಸಿಕೊಂಡು ಡಿಕೆಶಿ ಮತ್ತು ಅವರ ಕುಟುಂಬಸ್ಥರು ಅರುಣಾಚಲೇಶ್ವರನ ದರ್ಶನ ಪಡೆಯಲಿದ್ದಾರೆ. ಹೀಗಾಗಿ ಇಂದು ಸಂಜೆ 5 ಗಂಟೆಗೆ ತಿರುವಣ್ಣಾಮಲೈಗೆ ತೆರಳಲಿದ್ದಾರೆ. ನಾಳೆ ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಎಲ್ಲಾ ವಿಘ್ನಗಳು ನಿವಾರಣೆಯಾಗಲಿ ಎಂದು ಶುಭ ಮೂಹೂರ್ತದಲ್ಲಿ ಪೂಜೆ ಆರಂಭಿಸಿದ್ದೇವೆ. ಎರಡು ವರ್ಷಗಳಿಂದ ನೂತನ ಕಟ್ಟಡ ಕಾಮಗಾರಿ ನಿಂತುಹೋಗಿತ್ತು.ಅದು ಈಗ ಸಂಪೂರ್ಣವಾಗಿದೆ. ಈ ರಾಜ್ಯಕ್ಕೆ, ಪಕ್ಷದ ನಾಯಕರು, ಕಾರ್ಯಕರ್ತರಿಗೆ ಒಳ್ಳೆಯದಾಗಲಿ ಎಂದು ಹೋಮ ಮಾಡುತ್ತಿದ್ದೀವಿ. ರಾಜ್ಯ ಆದಷ್ಟು ಬೇಗ ಕೊರೊನಾದಿಂದ ಮುಕ್ತವಾಗಲಿ ಎಂದು ಡಿಕೆಶಿ ಹೇಳಿದರು.
ಅಧ್ಯಕ್ಷರಾಗಿ ಪದಗ್ರಹಣದ ಮಾಡುವ ಬಗ್ಗೆ ಪ್ರತಿಕ್ರಿಯಿಸಿ, ಇಂದು ಸಿದ್ದರಾಮಯ್ಯರನ್ನ ಭೇಟಿಯಾಗಿ ಚರ್ಚೆ ಮಾಡಿ, ದಿನಾಂಕ ನಿಗದಿ ಮಾಡಲಾಗುವುದು ಎಂದರು.
Follow us on Social media