ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರಿಸಿದ್ದು, ಕೊವಿಡ್-19ಗೆ ಮಂಗಳವಾರ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಇಂದು ಬೆಂಗಳೂರಿನ 76 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಈ ಮಧ್ಯೆ ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಸಂಜೆ ಮತ್ತೆ ಇಬ್ಬರಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 260ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಮಂಗಳವಾರ ಒಂದೇ ದಿನವೇ ಒಟ್ಟು 13 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇಂದು ಬೆಳಗ್ಗೆ 11 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇಂದು ಸಂಜೆ ಮತ್ತೆ ಎರಡು ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಕಲಬುರಗಿಯ 55 ವರ್ಷದ ವೃದ್ಧ, ಬೆಂಗಳೂರು ನಗರದ 65 ವರ್ಷದ ಹಾಗೂ 76 ವರ್ಷದ ವೃದ್ಧರು, ವಿಜಯಪುರದ 69 ವರ್ಷದ ವೃದ್ಧ ಸೋಂಕಿಗೆ ಬಲಿಯಾಗಿದ್ದಾರೆ.
ಬಾಗಲಕೋಟೆಯ 43 ವರ್ಷದ ಪುರುಷ ಮತ್ತು 32 ವರ್ಷದ ಮಹಿಳೆ, ಚಿಕ್ಕಬಳ್ಳಾಪುರದ 65 ವರ್ಷದ ವೃದ್ಧ, ಬಾಗಲಕೋಟೆಯ 39 ವರ್ಷದ ಮಹಿಳೆ, ಬೆಂಗಳೂರು ನಗರದ 65 ವರ್ಷದ ವೃದ್ಧ, ಹಿಂದುಪುರದಿಂದ ದ್ವಿಚಕ್ರವಾಹನದಲ್ಲಿ ಪ್ರಯಾಣ ಮಾಡಿದ ಬೆಂಗಳೂರಿನ 26 ವರ್ಷದ ವ್ಯಕ್ತಿ, ಕಲಬುರಗಿಯ 10 ವರ್ಷದ ಬಾಲಕಿ, 51ವರ್ಷದ ವೃದ್ಧ, 35 ವರ್ಷದ ಮಹಿಳೆ, ವಿಜಯಪುರದ 69 ವರ್ಷದ ವೃದ್ಧ, ಬೆಳಗಾವಿಯ 33 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.
Follow us on Social media