ಬೆಂಗಳೂರು: ಮಹಾರಾಷ್ಟ್ರಕ್ಕೆ ಲಗ್ಗೆಯಿದ್ದು ಭಾರೀ ನಷ್ಟ ಎದುರು ಮಾಡಿರುವ ಮಿಡತೆಗಳ ದಂಡು, ಇದೀಗ ಕರ್ನಾಟಕದಲ್ಲೂ ಆತಂಕವನ್ನು ಸೃಷ್ಟಿ ಮಾಡಿದ್ದು, ಹೀಗಾಗಿ ಮಿಡತೆ ದಾಳಿ ಎದುರಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ರಾಜ್ಯದ ಮೇಲೆ ಮಿಡತೆಗಳ ದಾಳಿ ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅವರು ಬುಧವಾರ ಸಭೆ ನಡೆಸಿದ್ದು, ಸಭೆಯಲ್ಲಿ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ, ಕೀಟಶಾಸ್ತ್ರಜ್ಞ ಡಾ.ಶೈಲೇಶಾ, ಕೃಷಿ, ತೋಟಗಾರಿಕೆ, ಅರಣ್ಯ, ಕಂದಾಯ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರ ಭಾಗವಹಿಸಿದ್ದರು.
ಮಿಡತೆ ದಾಳಿ ಕುರಿತು ಮಾತನಾಡಿರುವ ಡಾ.ಶೈಲೇಶಾ ಅವರು, ಮೇ 30 ರವರೆಗೆ ಗಾಳಿಯ ದಿಕ್ಕು ದಕ್ಷಿಣ ದಿಕ್ಕಿನಲ್ಲಿತ್ತು. ಹೀಗಾಗಿ ಮಿಡತೆಗಳು ರಾಜ್ಯ ಪ್ರವೇಶಿಸುತ್ತವೆ ಎಂಬ ಆತಂಕವಿತ್ತು. ಆದರೆ, ಮೇ.30ರ ಬಳಿಕ ಗಾಳಿಯ ದಿಕ್ಕು ಉತ್ತರಕ್ಕೆ ಬದಲಾಗಿದ್ದು, ತೆಲಂಗಾಣ ಮತ್ತು ಛತ್ತೀಸ್ಗಢ ರಾಜ್ಯಗಳು ಮಿಡತೆ ದಾಳಿಗೆ ಗುರಿಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಆಂಫಾನ್ ಚಂಡಮಾರುತದ ಪರಿಣಾಮ ಗಾಳಿಯ ದಿಕ್ಕು ಬದಲಾಗಿದೆ. ಹೀಗಾಗಿ ಪಾಕಿಸ್ತಾನಕ್ಕೆ ಹತ್ತಿರ ಇರುವ ಗುಜರಾತ್, ರಾಜಸ್ತಾನ, ಪಂಬಾಜ್ ಮತ್ತು ಮಧ್ಯಪ್ರದೇಶಗಳ ಮೇಲೆ ಮಿಡತೆಗಳು ದಾಳಿ ಮಾಡಿವೆ. ಈಗಾಗಲೇ ರಾಜ್ಯ ಸರ್ಕಾರ ಮಹಾರಾಷ್ಟ್ರ ಗಡಿಭಾಗದಲ್ಲಿರುವ ರಾಜ್ಯದ ಜಿಲ್ಲೆಗಳಾದ ಕೊಪ್ಪಳ, ವಿಜಯಪುರ, ಬೀದರ್ ಹಾಗೂ ಯಾದಗಿರಿಗೆ ಕಟ್ಟೆಚ್ಚರದಿಂದಿರುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೀದರ್, ಯಾಗದಿರಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದ್ದು, ಮಿಡತೆ ದಾಳಿ ನಿಯಂತ್ರಿಸಲು ಸಿದ್ಧತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಬೀದರ್ ಜಿಲ್ಲಾಧಿಕಾರಿಯವರು ಬೀದರಿನಿಂದ ಉತ್ತರಕ್ಕೆ ಇರುವ ಮಹಾರಾಷ್ಟ್ರದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದಾರೆ.
ಮಿಡತೆಗಳು ಯಾವ ದಿಕ್ಕಿನತ್ತ ಪ್ರಯಾಣಿಸುತ್ತಿವೆ ಎಂಬುದರ ಮಾಹಿತಿ ಕಲೆಹಾಕಲಾಗುತ್ತಿದೆ. ಮಹಾರಾಷ್ಟ್ರದ ಕೃಷಿ ಆಯುಕ್ತ ಸುಹಾಸ್ ದೀವ್ಸ್ ಅವರು ನೀಡಿರುವ ಮಾಹಿತಿಯಂತೆ ನಾಗ್ಪುರಕ್ಕೆ ಬಂದಿದ್ದ ಮಿಡತೆಗಳ ದಂಡು ಎರಡು ಗುಂಪಾಗಿ ವಿಭಾಗವಾಗಿದ್ದು, ಒಂದು ಭಾಗ ಮಧ್ಯಪ್ರದೇಶದ ಕಡೆಗೆ ವಾಪಸ್ ಆಗಿದೆ. ಮತ್ತೊಂದು ಭಾಗ ನಾಗ್ಪುರದಿಂದ ಇನ್ನೂ ಪೂರ್ವಕ್ಕೆ ಇರುವ ಮಹಾರಾಷ್ಟ್ರದ ಭಂಡಾರ ಜಿಲ್ಲೆಗೆ ಹೋಗಿದೆ. ಆದ್ದರಿಂದ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಕಡಿಮೆ ಎಂದಿದ್ದಾರೆ.
Follow us on Social media