ಬೆಂಗಳೂರು:ಕೋವಿಡ್-19 ಹಿನ್ನೆಲೆಯಲ್ಲಿ ಅನ್ ಲಾಕ್ -3 ಆರಂಭವಾಗಿರುವ ಹೊತ್ತಿನಲ್ಲಿ ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಕಮಲ್ ಪಂತ್ ಅಧಿಕಾರ ವಹಿಸಿಕೊಂಡಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ರಾಜ್ಯಕ್ಕೆ ಕೊರೋನಾ ಸೋಂಕು ಕಾಲಿಟ್ಟ ನಂತರ ಪೊಲೀಸ್ ಸಿಬ್ಬಂದಿ ಮುಂಚೂಣಿ ಕಾರ್ಯಕರ್ತರಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಹಲವರು ಕೆಲಸ ಮಾಡಿ ಬೆಂದು ಬವಳಿ ಹೋಗಿದ್ದಾರೆ. ಈ ಮಧ್ಯೆ ಬೆಂಗಳೂರಿನಲ್ಲಿ 1,200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಕೊರೋನಾ ತಗುಲಿದೆ. ಸರ್ಕಾರ ಸಂಡೆ ಲಾಕ್ ಡೌನ್ ಮತ್ತು ನೈಟ್ ಕರ್ಫ್ಯೂವನ್ನು ತೆಗೆದುಹಾಕಿದೆ. ಈ ಪರಿಸ್ಥಿತಿ, ಸವಾಲಿನ ನಡುವೆ ಕಮಲ್ ಪಂಥ್ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ನಿರ್ಗಮಿತ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಅವರಿಂದ ಅಧಿಕಾರ ವಹಿಸಿಕೊಂಡು ಮಾತನಾಡಿದ ಕಮಲ್ ಪಂತ್, ಲಾಕ್ ಡೌನ್ ಸಡಿಲಿಕೆಯಾದ ನಂತರ ಕೋವಿಡ್ ನಿರ್ವಹಣಾ ಕರ್ತವ್ಯಗಳಿಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವುದು, ಸಿಬ್ಬಂದಿ ಕೊರೋನಾ ಸೋಂಕಿನ ಮಧ್ಯೆ ಕೆಲಸ ಮಾಡುವುದು ಮತ್ತು ಪೊಲೀಸರ ದಿನನಿತ್ಯದ ಕಾರ್ಯವೈಖರಿಯನ್ನು ನಿಭಾಯಿಸುವುದನ್ನು ದೊಡ್ಡ ಸವಾಲಾಗಿದೆ ಎಂದು ಹೇಳಿದರು.
ಅಗತ್ಯಕ್ಕೆ ತಕ್ಕಂತೆ ಶಿಷ್ಟಾಚಾರ ನಿಯೋಜನೆಯನ್ನು ಪರಾಮರ್ಶಿಸಬೇಕು. ಪೊಲೀಸರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಮ್ಮನ್ಸ್ ಹೊರಡಿಸುವುದು, ವಾರಂಟ್ ಹೊರಡಿಸುವುದು ಮುಂತಾದ ಅವರ ಕೆಲಸಗಳನ್ನು ಕಡಿಮೆ ಮಾಡಲಾಗುವುದು. ಪೊಲೀಸರಿಗೆ ನೆರವು ನೀಡಲು ಹೋಂ ಗಾರ್ಡ್ಸ್ ಗಳನ್ನು ಸಹ ನಿಯೋಜನೆ ಮಾಡಲಾಗುವುದು ಎಂದರು.
ದೀರ್ಘ ಸಮಯದಿಂದ ಕೋವಿಡ್ -19 ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರಿಗೂ ಒತ್ತಡವಾಗುತ್ತಿದೆ, ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬದವರು ಆತಂಕಕ್ಕೊಳಗಾಗಿದ್ದಾರೆ. ಅವರ ಕಷ್ಟ ಸುಖಗಳನ್ನು ವಿಚಾರಿಸಬೇಕಾಗಿದೆ. ನಮ್ಮ ಮುಂದೆ ಹಲವು ಸವಾಲುಗಳಿವೆ, ಅವುಗಳಿಗೆ ಸಹ ಪರಿಹಾರ ಹುಡುಕಬೇಕಿದೆ ಎಂದು ಪಂತ್ ಹೇಳಿದರು.
Follow us on Social media