ಮುಂಬೈ: ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂಬತ್ತು ವಿಕೆಟ್‌ಗಳ ಅತ್ಯಂತ ಹೀನಾಯ ಸೋಲು ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ, ಸನ್‌ರೈಸರ್ಸ್ ತಂಡದ ಮಾರಕ ಬೌಲಿಂಗ್ ದಾಳಿಯ ಎದುರು ಮಕಾಡೆ ಮಲಗಿತು. 16. 1 ಓವರ್‌ಗಳಿಗೆ ಕೇವಲ 68 ರನ್‌ಗಳಿಗೆ ಆಲ್‌ಔಟ್ ಆಯಿತು. ಇದು ಐಪಿಎಲ್ ಇತಿಹಾಸದಲ್ಲಿ ಆರನೇ ಅತಿ ಕಡಿಮೆ ಮೊತ್ತವಾಗಿದೆ.
ಕಳೆದ ಮಂಗಳವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಡಕ್ ಔಟ್ ಆಗಿದ್ದ ವಿರಾಟ್ ಕೊಹ್ಲಿ ಇಂದು ಮತ್ತೊಮ್ಮೆ ಡಕ್ ಔಟ್ ಆದರು. ಆರ್ ಸಿಬಿ ಮಾಜಿ ನಾಯಕನ ಶೂನ್ಯ ಸಾಧನೆ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತು.
ಅಭಿಷೇಕ್ ಶರ್ಮಾ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಆರ್ ಸಿಬಿ ವಿರುದ್ಧ 8 ಓವರ್‌ಗಳಿಗೆ ಭರ್ಜರಿ ಗೆಲುವು ಸಾಧಿಸಿತು. ಅಭಿಷೇಕ್ ಶರ್ಮಾ ಕೇವಲ 28 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 8 ಬೌಂಡರಿಯೊಂದಿಗೆ 47 ರನ್ ಸಿಡಿಸಿ ಗೆಲುವಿನಂಚಿನಲ್ಲಿ ವಿಕೆಟ್ ಒಪ್ಪಿಸಿದರು.
ನಾಯಕ ಕೇನ್ ವಿಲಿಯಮ್ಸನ್ ಅಜೇಯ 16 ರನ್ ಗಳಿಸಿದರೆ, ರಾಹುಲ್ ತ್ರಿಪಾಠಿ ಸಿಕ್ಸರ್ ಮೂಲಕ ಪಂದ್ಯವನ್ನು ಮುಗಿಸಿದರು. ಈ ಗೆಲುವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ 10 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೇರಿದರೆ, ಹೀನಾಯ ಸೋಲಿನ ಮೂಲಕ ಆರ್‌ಸಿಬಿ 4ನೇ ಸ್ಥಾನಕ್ಕೆ ಇಳಿಯಿತು.
Follow us on Social media